ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆಫ್ರಿಕಾ ದ್ವಿತೀಯ ಇನಿಂಗ್ಸ್ ನಲ್ಲಿ 176 ರನ್ ಗಳಿಗೆ ಆಲೌಟ್ ಆಗುವ ಮೂಲಕ ಪಂದ್ಯ ಗೆಲ್ಲಲು ಭಾರತಕ್ಕೆ 79 ರನ್ ಗಳ ಗುರಿ ನೀಡಿದೆ.
ಮೊದಲ ಇನಿಂಗ್ಸ್ ನಲ್ಲಿ ಆಫ್ರಿಕಾ 55 ರನ್ ಗಳಿಗೆ ಆಲೌಟ್ ಆಗಿತ್ತು. ಭಾರತ 153 ರನ್ ಗಳಿಗೆ ಆಲೌಟ್ ಆಗಿ 98 ರನ್ ಗಳ ಮಹತ್ವದ ಮುನ್ನಡೆ ಪಡೆದಿತ್ತು. ದ್ವಿತೀಯ ಇನಿಂಗ್ಸ್ ನಲ್ಲಿ ನಿನ್ನೆ 3 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿ ದಿನದಾಟ ಮುಗಿಸಿದ್ದ ಆಫ್ರಿಕಾ ಇಂದು ಬುಮ್ರಾ ದಾಳಿಗೆ ತತ್ತರಿಸಿ 176 ರನ್ ಗಳಿಗೆ ಆಲೌಟ್ ಆಯಿತು. ಬುಮ್ರಾ ಮತ್ತೊಮ್ಮೆ ಕೇಪ್ ಟೌನ್ ಅಂಗಳಲ್ಲಿ 5 ವಿಕೆಟ್ ಗಳ ಗೊಂಚಲು ಪಡೆದರು. ಈ ಮೂಲಕ ದ.ಆಫ್ರಿಕಾದಲ್ಲಿ ಅತೀ ಹೆಚ್ಚು ಬಾರಿ 5 ವಿಕೆಟ್ ಪಡೆದ ಜಾವಗಲ್ ಶ್ರೀನಾಥ್ ದಾಖಲೆಯನ್ನು ಸರಿಗಟ್ಟಿದರು. ಇಬ್ಬರೂ ಈಗ 3 ಬಾರಿ 5 ವಿಕೆಟ್ ಪಡೆದಂತಾಗಿದೆ.
ಒಂದೆಡೆ ವಿಕೆಟ್ ಗಳು ತರಗೆಲೆಯಂತೆ ಉದುರುತ್ತಿದ್ದರೆ ಆಫ್ರಿಕಾ ಪರ ಆಡನ್ ಮಾರ್ಕರಮ್ ಮಾತ್ರ ಏಕಾಂಗಿಯಾಗಿ ಹೋರಾಟ ನಡೆಸಿದ್ದಲ್ಲದೆ ಅಮೋಘ ಶತಕ ಸಿಡಿಸಿದರು. ಬೌಲರ್ ಸ್ನೇಹಿ ಪಿಚ್ ನಲ್ಲೂ ಕೇವಲ 103 ಎಸೆತಗಳಿಂದ 106 ರನ್ ಗಳಿಸಿ ತಂಡದ ಮಾನ ಕಾಪಾಡಿದರು. ಅವರ ಈ ಹೋರಾಟದ ಶತಕಕ್ಕೆ ಭಾರತೀಯ ಕ್ರಿಕೆಟಿಗರೂ ಅಭಿನಂದನೆ ಸಲ್ಲಿಸಿದರು.
ಭಾರತದ ಪರ ಮೊದಲ ಇನಿಂಗ್ಸ್ ನಲ್ಲಿ 2 ವಿಕೆಟ್ ಕಬಳಿಸಿದ್ದ ಬುಮ್ರಾ ಎರಡನೇ ಇನಿಂಗ್ಸ್ ನಲ್ಲಿ 6 ವಿಕೆಟ್ ತಮ್ಮದಾಗಿಸಿಕೊಂಡರು. ಮೊದಲ ಇನಿಂಗ್ಸ್ ನಲ್ಲಿ 6 ವಿಕೆಟ್ ಕಬಳಿಸಿದ್ದ ಮೊಹಮ್ಮದ್ ಸಿರಾಜ್ ಈ ಇನಿಂಗ್ಸ್ ನಲ್ಲಿ 1 ವಿಕೆಟ್ ತಮ್ಮದಾಗಿಸಿಕೊಂಡರು. ಉಳಿದಂತೆ ಮುಕೇಶ್ ಕುಮಾರ್ 2, ಪ್ರಸಿದ್ಧ ಕೃಷ್ಣ 1 ವಿಕೆಟ್ ತಮ್ಮದಾಗಿಸಿಕೊಂಡರು. ಇತ್ತೀಚೆಗಿನ ವರದಿ ಬಂದಾಗ ಭಾರತ ವಿಕೆಟ್ ನಷ್ಟವಿಲ್ಲದೇ 39 ರನ್ ಗಳಿಸಿದೆ.