ಮುಂಬೈ: ಇನ್ನೇನು ಟಿ20 ವಿಶ್ವಕಪ್ ಗೆ ಕೆಲವೇ ದಿನಗಳು ಬಾಕಿಯಿದ್ದು, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾರ ಟಿ20 ದಾಖಲೆಗಳೇನು ಎಂದು ಮೆಲುಕು ಹಾಕೋಣ.
ಟಿ20 ವಿಶ್ವಕಪ್ ಗಳಲ್ಲಿ ರೋಹಿತ್ ಶರ್ಮಾ ಗರಿಷ್ಠ ರನ್ ಸರದಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಹೊಂದಿದ್ದಾರೆ. ಒಟ್ಟು 39 ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ 38 ರ ಸರಾಸರಿಯಲ್ಲಿ ಗಳಿಸಿದ್ದು 847 ರನ್ ಗಳು. ಇದು ಎರಡನೇ ಬಾರಿಗೆ ರೋಹಿತ್ ನಾಯಕನಾಗಿ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಇದಕ್ಕೆ ಮೊದಲು ಕಳೆದ ಬಾರಿ ಟಿ20 ವಿಶ್ವಕಪ್ ನಲ್ಲಿ ಸೆಮಿಫೈನಲ್ ನಲ್ಲಿ ಸೋತು ನಿರಾಸೆ ಅನುಭವಿಸಿತ್ತು. ವಿಶೇಷವೆಂದರೆ 2007 ರಲ್ಲಿ ಧೋನಿ ನೇತೃತ್ವದಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದಾಗ ರೋಹಿತ್ ತಂಡದ ಭಾಗವಾಗಿದ್ದರು. ಆದರೆ ಅವರಿಗೆ ಆಡಲು ಅಷ್ಟಾಗಿ ಅವಕಾಶ ಸಿಕ್ಕಿರಲಿಲ್ಲ.
ಇದುವರೆಗೆ ನಡೆದ ಎಲ್ಲಾ 7 ಟಿ20 ವಿಶ್ವಕಪ್ ಗಳಲ್ಲಿ ಭಾಗವಹಿಸಿದ 6 ನೇ ಆಟಗಾರ ರೋಹಿತ್ ಶರ್ಮಾ. ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಅವರು ಒಟ್ಟು 9 ಅರ್ಧಶತಕ ಸಿಡಿಸಿದ್ದಾರೆ. 79 ರನ್ ಅಜೇಯರಾಗಿ ಗಳಿಸಿದ್ದು ಅವರ ಗರಿಷ್ಠ ರನ್ ಆಗಿದೆ.ಇದುವರೆಗೆ ಟಿ20 ವಿಶ್ವಕಪ್ ನಲ್ಲಿ ಶತಕ ಗಳಿಸಿಲ್ಲ. ಈ ಬಾರಿ ಆ ದಾಖಲೆಯನ್ನೂ ಮಾಡುತ್ತಾರಾ ನೋಡಬೇಕು.