ಮುಂಬೈ: ಮುಂಬರುವ ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾ ಆಯ್ಕೆ ಮಾಡಿದ ಬೆನ್ನಲ್ಲೇ ಇಂದು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಮತ್ತು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಮೊನ್ನೆಯಷ್ಟೇ ರೋಹಿತ್ ನೇತೃತ್ವದಲ್ಲಿ ನಾಲ್ವರು ಮೀಸಲು ಆಟಗಾರರು ಮತ್ತು 15 ಸದಸ್ಯರ ಟೀಂ ಇಂಡಿಯಾ ಪ್ರಕಟಿಸಲಾಗಿತ್ತು. ಈ ತಂಡದಲ್ಲಿ ಹಿರಿಯ ಆಟಗಾರ ಕೆಎಲ್ ರಾಹುಲ್ ಗೆ ಕೊಕ್ ನೀಡಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಇಂದು ಪತ್ರಿಕಾಗೋಷ್ಠಿಯಲ್ಲಿ ಪ್ರಮುಖವಾಗಿ ಈ ವಿಚಾರ ಎದುರಾಗುವ ಸಾಧ‍್ಯತೆಯಿದೆ.
ನಿರೀಕ್ಷೆಯಂತೇ ಸಂಜು ಸ್ಯಾಮ್ಸನ್ ಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ರಿಷಬ್ ಪಂತ್ ಬಹಳ ದಿನಗಳ ನಂತರ ಟೀಂ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಆದರೆ ಹಾರ್ದಿಕ್ ಪಾಂಡ್ಯರನ್ನು ತಂಡಕ್ಕೆ ಆಯ್ಕೆ ಮಾಡಿದ್ದಲ್ಲದೆ, ಉಪನಾಯಕನ ಪಟ್ಟ ನೀಡಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ಇಂದು ರೋಹಿತ್ ಮತ್ತು ಅಗರ್ಕರ್ ತಂಡದ ಆಯ್ಕೆ ಕುರಿತಂತೆ ಎಲ್ಲಾ ಗೊಂದಲಗಳು ಮತ್ತು ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಲಿದ್ದಾರೆ. ಇಂದು ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ ನಡೆಯಲಿದೆ. ಜೂನ್ 2 ರಿಂದ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ನಲ್ಲಿ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗಲಿದೆ.