ಕಿಂಗ್ಸ್ ಇಲೆವನ್ ಪಂಜಾಬ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಮೊಹಾಲಿಯಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೇವಲ ಒಂದು ರನ್ ಅಂತರದಿಂದ ರೋಚಕ ಜಯಗಳಿಸಿದೆ. ಕಿಂಗ್ಸ್ ಇಲೆವನ್‌ಗೆ ಕೊನೆಯ ಓವರಿನಲ್ಲಿ 17 ರನ್ ಅಗತ್ಯವಿತ್ತು. ಜೋರ್ಡಾನ್ ಬೌಲಿಂಗ್ ಕೈಗೆ ತೆಗೆದುಕೊಂಡರು. ಜೋರ್ಡಾನ್ ಬೌಲಿಂಗ್‌ನಲ್ಲಿ ಸ್ಟಾಯಿನಿಸ್ ಬೌಂಡರಿ ಮತ್ತು ಸಿಕ್ಸರ್ ಬಾರಿಸಿದರು.
ಕೊನೆಯ ಎಸೆತದಲ್ಲಿ ಕಿಂಗ್ಸ್ ಇಲೆವ್ ಗೆಲುವಿಗೆ 4 ರನ್ ಅಗತ್ಯವಿತ್ತು. ಕೊನೆಯ ಎಸೆತದಲ್ಲಿ ಕೇವಲ 2 ರನ್ ಮಾತ್ರ ಸಿಕ್ಕಿದ್ದರಿಂದ ರಾಯಲ್ ಚಾಲೆಂಜರ್ಸ್ ಗೆಲುವಿನ ನಗೆ ಬೀರಿತು. ಮೊದಲಿಗೆ ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಪರ ವಿರಾಟ್ ಕೊಹ್ಲಿ ಮತ್ತು ಲೋಕೇಶ್ ರಾಹುಲ್ ಉತ್ತಮ ಅಡಿಪಾಯ ಹಾಕಿದರು. 8ನೇ ಓವರಿನಲ್ಲಿ ಲೋಕೇಶ್ ರಾಹುಲ್ ಔಟಾದ ಬೆನ್ನ ಹಿಂದೆ ವಿರಾಟ್ ಕೊಹ್ಲಿ ಕೂಡ ವಿಕೆಟ್ ಒಪ್ಪಿಸಿದರು.
ಅದಾದ ಬಳಿಕ ಡಿ ವಿಲಿಯರ್ಸ್ ತಮ್ಮ ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡಿ 35 ಎಸೆತಗಳಲ್ಲಿ ಬಿರುಸಿನ 64 ರನ್ ಗಳಿಸಿದರು. ಅವರ ಸ್ಕೋರಿನಲ್ಲಿ 5 ಬೌಂಡರಿ ಮತ್ತು 2 ಸಿಕ್ಸರುಗಳಿದ್ದವು. ಸಚಿನ್ ಬೇಬಿ ಅವರಿಗೆ ಉತ್ತಮ ಸಾಥ್ ನೀಡಿ 33 ರನ್ ಗಳಿಸಿದರು. ರಾಯಲ್ ಚಾಲೆಂಜರ್ಸ್ 6 ವಿಕೆಟ್ ಕಳೆದುಕೊಂಡು 175 ರನ್ ಗಳಿಸಿತು. ಕೆ.ಸಿ. ಕಾರ್ಯಪ್ಪ ಮತ್ತು ಸಂದೀಪ್ ಶರ್ಮಾ ತಲಾ ಎರಡು ವಿಕೆಟ್ ಕಬಳಿಸಿದರು. ಇದಕ್ಕೆ ಉತ್ತರವಾಗಿ ಕಿಂಗ್ಸ್ ಇಲೆವನ್ ಪರ ಮುರಳಿ ವಿಜಯ್ 57 ಎಸೆತಗಳಲ್ಲಿ 89 ರನ್ ಗಳಿಸಿದರು. ಕೊನೆಯ ಓವರುಗಳಲ್ಲಿ ಸ್ಟಾಯಿನಸ್ ಬಿರುಸಿನ ಆಟವಾಡಿ ಗೆಲುವಿಗೆ ಪ್ರಯತ್ನಿಸಿದರೂ ಕೇವಲ ಒಂದು ರನ್ ಅಂತರದಿಂದ ಸೋತು ಕಿಂಗ್ಸ್ ಇಲೆವನ್ ನಿರಾಶೆ ಅನುಭವಿಸಿತು.