ನಿಷೇಧಿತ ಉದ್ದೀಪನಾ ಮದ್ದು ಸೇವಿಸಿ 2 ವರ್ಷ ನಿಷೇಧದ ಶಿಕ್ಷೆ ಅನುಭವಿಸುತ್ತಿರುವ ಐದು ಬಾರಿ ಗ್ರಾಂಡ್ ಸ್ಲಾಮ್ ಟೆನ್ನಿಸ್ ಚಾಂಪಿಯನ್ ಮಾರಿಯಾ ಶರಪೋವಾ ಕ್ರೀಡಾ ನ್ಯಾಯಾಲಯದಲ್ಲಿ ಮಂಗಳವಾರ ಮೇಲ್ಮನವಿ ಸಲ್ಲಿಸಿದ್ದಾರೆ. ಕಳೆದ ಜನವರಿಯಲ್ಲಿ ನಡೆದ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಸಂದರ್ಭದಲ್ಲಿ ನಿಷೇಧಿತ ಉದ್ದೀಪನಾ ಮದ್ದು ಮೆಲ್ಡೋನಿಯಂ ಸೇವನೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದಿದ್ದರಿಂದ 29 ವರ್ಷದ ರಷ್ಯನ್ ಆಟಗಾರ್ತಿಗೆ ಅಂತಾರಾಷ್ಟ್ರೀಯ ಟೆನ್ನಿಸ್ ಒಕ್ಕೂಟವು 2 ವರ್ಷಗಳ ನಿಷೇಧದ ಶಿಕ್ಷೆ ವಿಧಿಸಿತ್ತು.
ಸಿಎಎಸ್‌ಗೆ ನೀಡಿದ ಮೇಲ್ಮನವಿಯಲ್ಲಿ ಶರಪೋವಾ ನ್ಯಾಯಮಂಡಳಿ 2 ವರ್ಷದ ಆ್ಯಂಟಿ ಡೋಪಿಂಗ್ ನಿಯಮದ ಉಲ್ಲಂಘನೆ ಹಿನ್ನಲೆಯಲ್ಲಿ 2 ವರ್ಷಗಳ ನಿಷೇಧವನ್ನು ರದ್ದುಮಾಡುವಂತೆ ಕೋರಿದ್ದರು. ಈ ಕುರಿತು ಜುಲೈ 18ರೊಳಗೆ ತೀರ್ಪು ಹೊರಬೀಳಲಿದ್ದು, ಅವರ ನಿಷೇಧವನ್ನು ತೆರವು ಮಾಡಿದರೆ ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಆಶಯವನ್ನು ಶರಪೋವಾ ಹೊಂದಿದ್ದಾರೆ.