ಮುಂಬೈ: ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಐಪಿಎಲ್ ನ ಆರಂಭಿಕ ಪಂದ್ಯವನ್ನು ಮಿಸ್ ಮಾಡಿಕೊಳ್ಳುವ ಸುದ್ದಿಯಿದೆ.
ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಎರಡನೇ ಇನಿಂಗ್ಸ್ ನಲ್ಲಿ 95 ರನ್ ಸಿಡಿಸಿ ಫಾರ್ಮ್ ಪ್ರದರ್ಶಿಸಿದ್ದ ಶ್ರೇಯಸ್ ಅಯ್ಯರ್ ಬಳಿಕ ವಿದರ್ಭ ಬ್ಯಾಟಿಂಗ್ ವೇಳೆ ಫೀಲ್ಡಿಂಗ್ ಗಿಳಿದಿರಲಿಲ್ಲ. ಅವರಿಗೆ ಮತ್ತೆ ಬೆನ್ನು ನೋವು ಕಾಡುತ್ತಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಎರಡು ದಿನದಿಂದ ಮೈದಾನಕ್ಕಿಳಿಯಲಿಲ್ಲ ಎನ್ನಲಾಗಿದೆ.
ಇತ್ತೀಚೆಗೆ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಅವರು ಬೆನ್ನು ನೋವಿನಿಂದಾಗಿ ಸರಣಿಯಿಂದ ಹೊರ ಹೋಗಿದ್ದರು. ಬಳಿಕ ಎನ್ ಸಿಎ ಅಧಿಕಾರಿಗಳು ಅವರು ಫಿಟ್ ಎಂದು ಘೋಷಣೆ ಮಾಡಿದ್ದರು. ಬಳಿಕ ಬಿಸಿಸಿಐ ಒತ್ತಡಕ್ಕೆ ಮಣಿದು ರಣಜಿ ಟ್ರೋಫಿ ಫೈನಲ್ ಆಡಿದ್ದರು. ಆದರೆ ಈಗ ಮತ್ತೆ ಬೆನ್ನು ನೋವಿನ ಸಮಸ್ಯೆಗೊಳಗಾಗಿದ್ದಾರೆ.
ಹೀಗಾಗಿ ಐಪಿಎಲ್ ಆರಂಭಿಕ ಕೆಲವು ಪಂದ್ಯಕ್ಕೆ ಅಯ್ಯರ್ ಮಿಸ್ ಆಗುವ ಸಾಧ‍್ಯತೆಯಿದೆ. ಅಯ್ಯರ್ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿದ್ದಾರೆ. ಕಳೆದ ಬಾರಿಯೂ ಶಸ್ತ್ರಚಿಕಿತ್ಸೆಯಿಂದಾಗಿ ಅವರು ಐಪಿಎಲ್ ಆಡಿರಲಿಲ್ಲ. ಈಗ ರಿಸ್ಕ್ ತೆಗೆದುಕೊಂಡು ರಣಜಿ ಆಡಿ ಮತ್ತೆ ಗಾಯಕ್ಕೊಳಗಾಗಬೇಕಿದೆ ಎಂದು ಅವರ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.