ಕೋಲ್ಕೊತ್ತಾ: ಟೀಂ ಇಂಡಿಯಾ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಗಾಯದ ಸಮಸ್ಯೆಗೊಳಗಾಗಿದ್ದು ಐಪಿಎಲ್ ನಲ್ಲಿ ಆರಂಭಿಕ ಪಂದ್ಯಗಳಿಗೆ ಕೋಲ್ಕೊತ್ತಾ ನೈಟ್ ರೈಡರ್ಸ್ ನಾಯಕ ಅಲಭ್ಯರಾಗಲಿದ್ದಾರೆ ಎಂಬ ಸುದ್ದಿಗಳಿತ್ತು.
ಆದರೆ ಈಗ ಶ್ರೇಯಸ್ ಗಾಯದ ಹೊರತಾಗಿಯೂ ಐಪಿಎಲ್ ನಲ್ಲಿ ತಮ್ಮ ತಂಡವನ್ನು ಸೇರಿಕೊಳ್ಳುತ್ತಿದ್ದಾರೆ. ಗಾಯವಾಗಿರುವುದು ನಿಜ. ಆದರೆ ಗಂಭೀರವಲ್ಲ ಹೀಗಾಗಿ ಶ್ರೇಯಸ್ ಕೆಕೆಆರ್ ಕ್ಯಾಂಪ್ ಗೆ ಎರಡೇ ದಿನಗಳಲ್ಲಿ ಬರಲಿದ್ದಾರೆ ಎಂದು ಕೆಕೆಆರ್ ತಂಡದ ಮೂಲಗಳು ಹೇಳಿವೆ.
ಟೀಂ ಇಂಡಿಯಾ-ಇಂಗ್ಲೆಂಡ್ ಸರಣಿ ವೇಳೆ ಶ್ರೇಯಸ್ ಬೆನ್ನು ನೋವಿನ ಕಾರಣದಿಂದ ಸರಣಿಯಿಂದ ಹೊರನಡೆದಿದ್ದರು. ಬಳಿಕ ಅವರು ಗಾಯದ ನೆಪ ಹೇಳಿ ರಣಜಿ ಆಡುವುದನ್ನು ತಪ್ಪಿಸಿಕೊಳ್ಳಲು ಯತ್ನಿಸಿದ್ದರು ಎಂದು ಆರೋಪವಾಗಿತ್ತು. ಇದೇ ಕಾರಣಕ್ಕೆ ಬಿಸಿಸಿಐ ಅವರನ್ನು ಕೇಂದ್ರೀಯ ಗುತ್ತಿಗೆಯಿಂದ ಹೊರಹಾಕಿತ್ತು.
ಇದರ ಬೆನ್ನಲ್ಲೇ ಶ್ರೇಯಸ್ ರಣಜಿ ಟ್ರೋಫಿ ಫೈನಲ್ ಆಡಿದ್ದರು. ಆದರೆ ಮತ್ತೆ ಅವರು ಬೆನ್ನು ನೋವಿಗೊಳಗಾಗಿದ್ದರು. ಹೀಗಾಗಿ ಅವರು ಐಪಿಎಲ್ ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ಶ್ರೇಯಸ್ ಕೆಕೆಆರ್ ತಂಡಕ್ಕೆ ಬರುತ್ತಿರುವುದು ತಂಡಕ್ಕೆ ಸಮಾಧಾನಕರ ವಿಷಯವಾಗಿದೆ.
ಕೆಕೆಆರ್ ತಂಡಕ್ಕೆ ಇದುವರೆಗೆ ಶ್ರೇಯಸ್ ಅಯ್ಯರ್ ಗಾಯದ ಬಗ್ಗೆ ಮಾಹಿತಿಯಿಲ್ಲ. ಆದರೆ ಮುಂಬೈ ಪರ ರಣಜಿ ಆಡುವಾಗ ಕೊನೆಯ ಎರಡು ದಿನ ಬೆನ್ನು ನೋವಿನಿಂದಾಗಿ ಎರಡು ಬಾರಿ ಫಿಸಿಯೋ ಸಹಾಯ ಪಡೆದಿದ್ದರು ಎಂದು ತಿಳಿದುಬಂದಿದೆ. ಆದರೆ ಐಪಿಎಲ್ ನಲ್ಲಿ ಆಡಲು ಯಾವುದೇ ತೊಂದರೆಯಾಗದು ಎನ್ನಲಾಗಿದೆ.