9 ವರ್ಷದಲ್ಲೇ ಅಮ್ಮನಿಗೆ ಮಾಡಿದ್ದ ಪ್ರಾಮಿಸ್ ಉಳಿಸಿಕೊಂಡ ಆರ್ ಸಿಬಿ ಕ್ವೀನ್ ಸ್ಮೃತಿ ಮಂಧಾನ

Krishnaveni K

ಸೋಮವಾರ, 20 ಮೇ 2024 (14:47 IST)
ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ನಾಯಕಿ, ಭಾರತೀಯ ಮಹಿಳಾ ಕ್ರಿಕೆಟ್ ತಾರೆ ಸ್ಮೃತಿ ಮಂಧಾನ ತಮ್ಮ ಬಾಲ್ಯದಲ್ಲಿ ಅಮ್ಮನಿಗೆ ಮಾಡಿದ್ದ ಪ್ರಾಮಿಸ್ ನ್ನು ನೆನೆಸಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಅಮ್ಮನಿಗೆ ಮಾಡಿದ್ದ ಪ್ರಾಮಿಸ್ ನ್ನು ಅವರು ಇಂದು ಉಳಿಸಿಕೊಂಡಿದ್ದಾರಂತೆ. ಅಷ್ಟಕ್ಕೂ ಅವರು ಮಾಡಿದ್ದ ಪ್ರಾಮಿಸ್ ಏನಾಗಿತ್ತು ನೋಡಿ.

ಸ್ಮೃತಿ ಮಂಧಾನ ಇದೀಗ ಪ್ರತಿಷ್ಠಿ ಫೆಮಿನಾ ಮ್ಯಾಗಜಿನ್ ನ ಮುಖಪುಟ ತಾರೆಯಾಗಿದ್ದು, ಈ ವೇಳೆ ಫೆಮಿನಾಗೆ ನೀಡಿದ ಸಂದರ್ಶನದಲ್ಲಿ ಕುಟುಂಬದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಬಾಲ್ಯದಲ್ಲಿ ತಮ್ಮ ಮಧ್ಯಮ ವರ್ಗದ ಕಷ್ಟಗಳು, ಅಮ್ಮನಿಗೆ ಮಾಡಿದ್ದ ಪ್ರಾಮಿಸ್ ನೆನೆಸಿಕೊಂಡಿದ್ದಾರೆ.

‘ನಮ್ಮದು ಮಧ‍್ಯಮ ವರ್ಗದ ಕುಟುಂಬವಾಗಿತ್ತು. ಬಾಲ್ಯದಲ್ಲಿ ನಾವು ಬಾಡಿಗೆ ಮನೆಯಲ್ಲಿದ್ದೆವು. ನಮ್ಮದೇ ಸ್ವಂತ ಮನೆಯಿರಲಿಲ್ಲ.  ನಾನಾಗ ಚಿಕ್ಕವಳು. ಹಾಗಿದ್ದರೂ ಅಮ್ಮ ಚಿಂತೆಯಲ್ಲಿ ಕೂತಿರುವುದನ್ನು ನೋಡಿ ಬೇಸರವಾಗಿತ್ತು. ಹೀಗಾಗಿ ಅಮ್ಮನ ಬಳಿ ನೀನು ಆರಾಮವಾಗಿರು ಅಮ್ಮ, ಚಿಂತೆ ಮಾಡಬೇಡ, ನಾನು ದೊಡ್ಡವಳಾದ ಮೇಲೆ ನಮಗಾಗಿ ಒಂದು ಮನೆ ಖರೀದಿಸಿ ನಿಮಗೆ ಕೊಡುತ್ತೇನೆ ಎಂದು ಪ್ರಾಮಿಸ್ ಮಾಡಿದ್ದೆ. ನಾನು ಮನೆ ಖರೀದಿ ಮಾಡಿದ ಬಳಿಕ ಕ್ರಿಕೆಟ್ ಎಂಬ ಈ ಕ್ರೀಡೆಯಿಂದಾಗಿ ನನಗೆ ಎಷ್ಟೆಲ್ಲಾ ಸಾಧ‍್ಯವಾಗಿದೆ ಎಂದು ಹೆಮ್ಮೆಯಾಯಿತು. ಅದೊಂದು ರೀತಿಯ ತೃಪ್ತಿಕರ ಮತ್ತು ಖುಷಿಯ ಕ್ಷಣವಾಗಿತ್ತು’ ಎಂದು ಸ್ಮೃತಿ ಹೇಳಿಕೊಂಡಿದ್ದಾರೆ.

‘ಯಾವುದಕ್ಕೂ ನಾನು ಹೆಚ್ಚು ಎಕ್ಸೈಟ್ ಆದವಳಲ್ಲ. ನನ್ನನ್ನು ಭಾರತ ತಂಡಕ್ಕೆ ಆಯ್ಕೆ ಮಾಡಿದಾಗಲೂ ಓಕೆ ಥ್ಯಾಂಕ್ಸ್ ಎಂದಷ್ಟೇ ಹೇಳಿದ್ದೆ. ಆ 17 ರ ಹರೆಯದಲ್ಲಿ ಬಹುಶಃ ನಾನು ಕುಣಿದಾಡಬಹುದಿತ್ತು. ಆದರೆ ಯಾಕೋ ನಾನು ಹಾಗೆ ಮಾಡಲಿಲ್ಲ. ಈಗ ನನ್ನ ಹೆತ್ತವರ ಮುಖದಲ್ಲಿ ಸಂತೋಷ, ತೃಪ್ತಿ ನೋಡಿ ನನ್ನ ಕ್ರಿಕೆಟ್ ವೃತ್ತಿ ಜೀವನದ ಬಗ್ಗೆ ಹೆಮ್ಮೆ ಎನಿಸುತ್ತದೆ. ಬಹುಶಃ ಮುಂದೆ ವಿಶ್ವಕಪ್ ಗೆಲುವಿನ ಆ ಒಂದು ಕ್ಷಣವೂ ನನ್ನ ಜೀವನದಲ್ಲಿ ಬರಬಹುದು ಎಂದುಕೊಂಡಿದ್ದೇನೆ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ