ರೆಹಾನೆ, ಕೆಎಲ್ ರಾಹುಲ್ ನಡೆಸಿಕೊಂಡ ರೀತಿಗೆ ವಿರಾಟ್ ಕೊಹ್ಲಿಗೆ ಪರೋಕ್ಷ ಎಚ್ಚರಿಕೆ ಕೊಟ್ಟ ಗಂಗೂಲಿ!

ಗುರುವಾರ, 19 ಜುಲೈ 2018 (09:25 IST)
ಲೀಡ್ಸ್: ಟೀಂ ಇಂಡಿಯಾದಲ್ಲಿ ಪ್ರತಿಭೆಯಿದ್ದೂ ಅವಕಾಶ ಸಿಗದ ಆಟಗಾರರೆಂದರೆ ಅಜಿಂಕ್ಯಾ ರೆಹಾನೆ ಮತ್ತು ಕೆಎಲ್ ರಾಹುಲ್. ಯಾವುದೋ ಕಾರಣಕ್ಕೆ ಇವರಿಬ್ಬರನ್ನು ಕೈ ಬಿಡುತ್ತಿರುವುದಕ್ಕೆ ಮಾಜಿ ನಾಯಕ ಸೌರವ್ ಗಂಗೂಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
 

ಇಂಗ್ಲೆಂಡ್ ವಿರುದ್ಧ ಕಿರು ಮಾದರಿ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಕೆಎಲ್ ರಾಹುಲ್ ರನ್ನು ನಿರ್ಣಾಯಕ ಪಂದ್ಯದಿಂದ ಹೊರಗಿಟ್ಟ ಮೇಲೆ ಅವರನ್ನು ಹೊರಗಿಡುವುದರ ಬಗ್ಗೆ ಆಗುತ್ತಿದ್ದ ಚರ್ಚೆಗೆ ಮತ್ತಷ್ಟು ಪುಕ್ಕ ಸಿಕ್ಕಿದೆ.

ರಾಹುಲ್ ರಂತೆಯೇ ಕಿರು ಮಾದರಿಯಲ್ಲಿ ಕಡೆಗಣಿಸಲ್ಪಡುತ್ತಿರುವ ಆಟಗಾರನೆಂದರೆ ಅಜಿಂಕ್ಯಾ ರೆಹಾನೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಮುನ್ನಡೆಸುವ ಪ್ರತಿಭಾವಂತ ಆಟಗಾರನಿಗೆ ಹೆಚ್ಚಾಗಿ ತ್ಯಾಗ ರಾಜ ಪಟ್ಟ ಸಿಗುವುದೇ ಹೆಚ್ಚು.

ಹೀಗಾಗಿ ಈ ಆಟಗಾರರನ್ನು ಕೊಹ್ಲಿ ಸರಿಯಾಗಿ ನೋಡಿಕೊಳ್ಳಬೇಕು, ಬಳಸಿಕೊಳ್ಳಬೇಕು ಎಂದು ಮಾಜಿ ನಾಯಕ ಗಂಗೂಲಿ ಸಲಹೆ ನೀಡಿದ್ದಾರೆ. ಭಾರತ ತಂಡ ಈಗ ಟಾಪ್ ಆರ್ಡರ್ ಬ್ಯಾಟ್ಸ್ ಮನ್ ಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಅಗ್ರ ಕ್ರಮಾಂಕದ ಆಟಗಾರರು ರನ್ ಗಳಿಸಲು ವಿಫಲರಾದರೆ ತಂಡ ಸೊರಗುತ್ತದೆ. ಇದು ಈಗ ಗಂಭೀರ ಸಮಸ್ಯೆಯಾಗಿ ಬೆಳೆಯುತ್ತಿದ್ದು, ಟೀಂ ಇಂಡಿಯಾ ಇದರ ಬಗ್ಗೆ ಗಮನ ಹರಿಸಲೇಬೇಕು ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

‘ನಾನಾಗಿದ್ದರೆ ಕಣ್ಣು ಮುಚ್ಚಿ ರಾಹುಲ್ ಗೆ ನಾಲ್ಕನೇ ಕ್ರಮಾಂಕ ಕೊಟ್ಟು ಬಿಡುತ್ತಿದ್ದೆ. ಒಂದು ಪಂದ್ಯದಲ್ಲಿ ಆಡಲಿಲ್ಲವೆಂದು ಉತ್ತಮ ಫಾರ್ಮ್ ನಲ್ಲಿರುವ ಆಟಗಾರನನ್ನು ಕೈ ಬಿಡುವುದು ತಪ್ಪು. ಸೀದಾ ರಾಹುಲ್ ಬಳಿ ಹೋಗಿ ನಿನಗೆ 15 ಪಂದ್ಯ ಕೊಡುತ್ತೇವೆ ಎಂದು ಮಾತನಾಡಲಿ. ಆಮೇಲೆ ಆಗುತ್ತದೆಂದು ನೀವೇ ನೋಡಿ. ಅಂತಹ ಆಟಗಾರರನ್ನು ನೀವು ಆಗಾಗ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಸಾಕಷ್ಟು ಅವಕಾಶ ಕೊಟ್ಟು ನೋಡಿ. ರೆಹಾನೆಗೂ ಇದೇ ರೀತಿ ಆಗುತ್ತಿದೆ’ ಎಂದು ಗಂಗೂಲಿ ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ