ಮುಂಬೈ: ಐಸಿಸಿ ಈವೆಂಟ್ ಗಳಲ್ಲಿ ಟೀಂ ಇಂಡಿಯಾ ಯಾವತ್ತೂ ಒತ್ತಡಕ್ಕೊಳಗಾಗುತ್ತದೆ ಎಂಬ ಆರೋಪವಿದೆ. ಈಗ ಮಾಜಿ ನಾಯಕ ಸೌರವ್ ಗಂಗೂಲಿ ಕೂಡಾ ಒತ್ತಡದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಬಗ್ಗೆಯೂ ಮಾತನಾಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಸೌರವ್ ಗಂಗೂಲಿ, ದೊಡ್ಡ ಟೂರ್ನಿಗಳಲ್ಲಿ ಭಾರತೀಯ ಕ್ರಿಕೆಟಿಗರು ಅತೀವ ಒತ್ತಡದಲ್ಲಿರುತ್ತಾರೆ. ವಿರಾಟ್ ಕೊಹ್ಲಿಯಂತಹ ದೊಡ್ಡ ಸ್ಟಾರ್ ಕ್ರಿಕೆಟಿಗರೂ ಒತ್ತಡದಲ್ಲಿರುತ್ತಾರೆ.
ರಾಹುಲ್ ದ್ರಾವಿಡ್ ಗೆ ನಾನು ಹೇಳಬಹುದಾದ ಸಲಹೆಯೆಂದರೆ ರಿಲ್ಯಾಕ್ಸ್ ಆಗಿರಿ, ತಪ್ಪಾಗದಂತೆ ನೋಡಿಕೊಳ್ಳಿ ಎನ್ನಬಹುದು. ಆದರೆ ಅವರು ಚಾಂಪಿಯನ್ ಕ್ರಿಕೆಟಿಗ. ರೋಹಿತ್ ಶರ್ಮಾ ಪತ್ನಿಯನ್ನು ನಾನು ಗ್ಯಾಲರಿಯಲ್ಲಿ ಕೂತಿರುವಾಗ ನೋಡುತ್ತೇನೆ. ಅವರು ತುಂಬಾ ಒತ್ತಡದಲ್ಲಿರುತ್ತಾರೆ. ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಕೂಡಾ ಎಷ್ಟು ಒತ್ತಡದಲ್ಲಿರುತ್ತಾರೆ ಎಂದು ನನಗೆ ಗೊತ್ತಾಗುತ್ತದೆ. ನಾವು ಭಾರತೀಯರು ಇಂತಹ ಒತ್ತಡದ ವಾತಾವರಣವನ್ನು ಸೃಷ್ಟಿಸಿಕೊಳ್ಳುತ್ತೇವೆ. ಆರಾಮವಾಗಿ ಸ್ವತಂತ್ರವಾಗಿ ಆಡಬೇಕು. ಆದರೆ ಅದು ಸಾಧ್ಯವಾಗುವುದಿಲ್ಲ ಎಂದು ಗಂಗೂಲಿ ವಿವರಿಸಿದ್ದಾರೆ.
2007 ರ ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್ ಗೆದ್ದ ಬಳಿಕ ಟೀಂ ಇಂಡಿಯಾ ಒಮ್ಮೆಯೂ ಟಿ20 ವಿಶ್ವಕಪ್ ಗೆದ್ದಿಲ್ಲ. ಕಳೆದ ಒಟ್ಟು ಎಂಟು ಆವೃತ್ತಿಗಳಲ್ಲಿ ಭಾರತ ಒಮ್ಮೆ ಫೈನಲ್ ವರೆಗೂ ತಲುಪಿದ್ದು ಇದೆ. ಆದರೆ ಫೈನಲ್ ನಲ್ಲಿ ಸೋತಿತ್ತು.