ಐಪಿಎಲ್ ಇತಿಹಾಸದಲ್ಲೇ ದಾಖಲೆಯ ಮೊತ್ತ ಪೇರಿಸಿದ ಸನ್ ರೈಸರ್ಸ್ ಹೈದರಾಬಾದ್

Krishnaveni K

ಬುಧವಾರ, 27 ಮಾರ್ಚ್ 2024 (21:29 IST)
ಹೈದರಾಬಾದ್: ಐಪಿಎಲ್ 2024 ರ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ದಾಖಲೆಯ ಮೊತ್ತ ಪೇರಿಸಿದೆ. 20 ಓವರ್ ಗಳಲ್ಲಿ ಹೈದರಾಬಾದ್ ತಂಡ 3 ವಿಕೆಟ್ ನಷ್ಟಕ್ಕೆ ಬರೋಬ್ಬರಿ 277 ರನ್ ಚಚ್ಚಿದೆ.

ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 263 ರನ್ ಗಳ ದಾಖಲೆ ಅಳಿಸಿ ಐಪಿಎಲ್ ಇತಿಹಾಸದಲ್ಲೇ ಗರಿಷ್ಠ  ಮೊತ್ತ ಪೇರಿಸಿದ ದಾಖಲೆ ಮಾಡಿದೆ. ಹೈದರಾಬಾದ್ ಬ್ಯಾಟಿಗರ ಅಬ್ಬರಕ್ಕೆ ಮುಂಬೈ ಇಂಡಿಯನ್ಸ್ ತಂಡದ ಬೌಲರ್ ಗಳು ದಿಕ್ಕೆಟ್ಟು ಕೂತಿದ್ದರು.

ಆರಂಭಿಕ ಮಯಾಂಕ್ ಅಗರ್ವಾಲ್ 11 ರನ್ ಗೆ ಔಟಾದರು. ಆದರೆ ಇನ್ನೊಂದೆಡೆ ಅಬ್ಬರ ಆರಂಭಿಸಿದ್ದು ಟ್ರಾವಿಸ್ ಹೆಡ್. ಕೇವಲ 24 ಎಸೆತ ಎದುರಿಸಿದ ಅವರು 62 ರನ್ ಸಿಡಿಸಿದರು. ಅವರಿಗೆ ಸಾಥ್ ನೀಡಿದ ಅಭಿಷೇಕ್ ಶರ್ಮ 23 ಎಸೆತಗಳಿಂದ 63 ರನ್ ಚಚ್ಚಿದರು. ಇಂತಹದ್ದೊಂದು ಸಿಡಿಲಬ್ಬರದ ಬ್ಯಾಟಿಂಗ್ ಐಪಿಎಲ್ ಇತಿಹಾಸದಲ್ಲೇ ಕಂಡಿರಲಿಲ್ಲ. ಈ ಜೋಡಿಯ ಅಬ್ಬರದಿಂದಾಗಿ ಹೈದರಾಬಾದ್ ಕೇವಲ 7 ಓವರ್ ಗಳಲ್ಲಿ 100 ರನ್ ಗಳಿಸಿ ದಾಖಲೆ ಮಾಡಿತ್ತು.

ಅಭಿಷೇಕ್ ಔಟಾದ ಬಳಿಕ ಕ್ರೀಸ್ ನಲ್ಲಿ ಆಡನ್ ಮಾರ್ಕರಮ್ ಮತ್ತು ಹೆನ್ರಿಚ್ ಕ್ಲಾಸನ್ ಅವರದ್ದೇ ಕಾರುಬಾರು. ಹೆನ್ರಿಚ್ ಕೇವಲ 34 ಎಸೆತಗಳಲ್ಲಿ 7 ಸಿಕ್ಸರ್ ಗಳೊಂದಿಗೆ ಅಜೇಯ 80 ರನ್ ಸಿಡಿಸಿದರೆ ಆಡನ್ 28 ಎಸೆತಗಳಿಂದ ಅಜೇಯ 42 ರನ್ ಸಿಡಿಸಿದರು. ಇದರೊಂದಿಗೆ ಹೈದರಾಬಾದ್ ಹೊಸ ಇತಿಹಾಸ ಬರೆಯಿತು.

ಮುಂಬೈ ಪರ ಬೌಲರ್ ಗಳ ಸ್ಥಿತಿ ಶೋಚನೀಯವಾಗಿತ್ತು. ಹಾರ್ದಿಕ್ 4 ಓವರ್ ಗಳಲ್ಲಿ 46 ರನ್ ನೀಡಿದರೆ ಕ್ವೆನಾ ಮಫಾಕ 4 ಓವರ್ ಗಳಲ್ಲಿ ಭರ್ತಿ 66 ರನ್ ನೀಡಿದರು! ಗೆರಾಲ್ಸ್ 4 ಓವರ್ ಗಳಲ್ಲಿ 57 ರನ್ ನೀಡಿದರು. ಇದ್ದವರಲ್ಲಿ ಬುಮ್ರಾನೇ ಪರವಾಗಿಲ್ಲ. ವಿಕೆಟ್ ಕೀಳದೇ ಇದ್ದರೂ ಅನುಭವಿ ವೇಗಿ 4 ಓವರ್ ಗಳ ಕೋಟಾದಲ್ಲಿ ಕೇವಲ 36 ರನ್ ನೀಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ