ಚೆನ್ನೈ: ಐಪಿಎಲ್ 2024 ರಲ್ಲಿ ಇಂದು ಆಡಿದ ಮೊದಲ ಪಂದ್ಯದಲ್ಲೇ ಗೆಲುವು ಕಂಡ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವೆ ಪಂದ್ಯ ನಡೆಯಲಿದೆ.
ವಿಶೇಷವೆಂದರೆ ಎರಡೂ ತಂಡಗಳೂ ಈ ಋತುವಿನಲ್ಲಿ ಹೊಸ ನಾಯಕರೊಂದಿಗೆ ಕಣಕ್ಕಿಳಿಯುತ್ತಿವೆ. ಸಿಎಸ್ ಕೆ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಭರ್ಜರಿ ಗೆಲುವು ದಾಖಲಿಸಿತ್ತು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಚೆನ್ನೈ ಮೇಲುಗೈ ಸಾಧಿಸಿತ್ತು.
ನಾಯಕನಾಗಿ ನಾಮಕಾವಸ್ಥೆಗೆ ಋತುರಾಜ್ ಗಾಯಕ್ ವಾಡ್ ಇದ್ದರೂ ತಂಡದ ಸಂಪೂರ್ಣ ಹೊಣೆ ಧೋನಿ ಕೈಯಲ್ಲೇ ಇದೆ. ಹೀಗಾಗಿ ತಂಡದ ಯೋಜನೆಗಳು ಧೋನಿ ಅಣತಿಯಂತೇ ನಡೆಯುತ್ತಿದೆ. ಇದರಿಂದಾಗಿ ಚೆನ್ನೈಗೆ ಮೊದಲ ಪಂದ್ಯದಲ್ಲೇ ಯಶಸ್ಸು ಸಿಕ್ಕಿತ್ತು.
ಇತ್ತ ಗುಜರಾತ್ ತಂಡಕ್ಕೆ ಕೋಚ್ ಆಶಿಷ್ ನೆಹ್ರಾ ಮಾಸ್ಟರ್ ಮೈಂಡ್ ಕೆಲಸ ಮಾಡುತ್ತಿದೆ. ನಾಯಕನಾಗಿ ಶುಬ್ಮನ್ ಗಿಲ್ ಗೆ ಇದು ಹೊಸ ಅನುಭವ. ಆದರೆ ತಂಡದ ಸಂಯೋಜನೆ, ಆಟದ ವೈಖರಿ ನೋಡಿದರೆ ಇದರ ಸಂಪೂರ್ಣ ಕ್ರೆಡಿಟ್ ಆಶಿಷ್ ನೆಹ್ರಾಗೆ ಸಲ್ಲಬೇಕು. ಕಳೆದ ಪಂದ್ಯದಲ್ಲಿ ಪ್ರಬಲ ಮುಂಬೈಯನ್ನು ಡೆತ್ ಓವರ್ ಗಳಲ್ಲಿ ಗುಜರಾತ್ ಕಟ್ಟಿ ಹಾಕಿದ ಪರಿ ಇದಕ್ಕೆ ಸಾಕ್ಷಿ. ಇಂದು ಚೆನ್ನೈ ತಂಡವನ್ನು ಕಟ್ಟಿ ಹಾಕಲು ಗುಜರಾತ್ ಮತ್ತೊಮ್ಮೆ ಅಂತಹದ್ದೇ ಬೌಲಿಂಗ್ ಪ್ರದರ್ಶನ ನೀಡಬೇಕಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.