ಕೈಕುಲುಕದ ಸೂರ್ಯಕುಮಾರ್ ಯಾದವ್ ಗೆ ಎಚ್ಚರಿಕೆ: ಭಾರತವನ್ನು ಅಣಕಿಸಿದ ಹ್ಯಾರಿಸ್ ರೌಫ್ ಗೆ ಏನು ಶಿಕ್ಷೆ

Krishnaveni K

ಶುಕ್ರವಾರ, 26 ಸೆಪ್ಟಂಬರ್ 2025 (17:56 IST)
Photo Credit: X
ದುಬೈ: ಏಷ್ಯಾ ಕಪ್ ಕ್ರಿಕೆಟ್ ಪಂದ್ಯದ ವೇಳೆ ಪಾಕಿಸ್ತಾನ ಆಟಗಾರರ ಕೈಕುಲುಕದೇ ಅವಮಾನಿಸಿದ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಐಸಿಸಿ ವಿಚಾರಣೆ ಎದುರಿಸಿದ್ದು ಈ ವೇಳೆ ಅವರಿಗೆ ಎಚ್ಚರಿಕೆ ನೀಡಲಾಗಿದೆ. ಹಾಗಿದ್ದರೆ ಭಾರತೀಯ ಸೇನೆಯನ್ನು ಅಣಕಿಸಿದ ಪಾಕಿಸ್ತಾನ ಆಟಗಾರ ಹ್ಯಾರಿಸ್ ರೌಫ್ ಗೆ ಏನು ಶಿಕ್ಷೆ ಇಲ್ಲಿದೆ ವಿವರ.

ಪಾಕಿಸ್ತಾನದ ವಿರುದ್ಧ ಎರಡೂ ಪಂದ್ಯಗಳಲ್ಲಿ ಭಾರತ ಎದುರಾಳಿ ಆಟಗಾರರ ಕೈ ಕುಲುಕಿಲ್ಲ. ಮೊದಲ ಪಂದ್ಯದಲ್ಲಿ ಭಾರತೀಯರು ಕೈ ಕುಲುಕದೇ ಇದ್ದ ವಿಚಾರಕ್ಕೆ ಪಾಕಿಸ್ತಾನ ಹೈಡ್ರಾಮಾ ಸೃಷ್ಟಿಸಿತ್ತು. ಈ ಸಂಬಂಧ ಐಸಿಸಿಗೂ ದೂರು ನೀಡಿತ್ತು. ಹೀಗಾಗಿ ಸೂರ್ಯಕುಮಾರ್ ಯಾದವ್ ಗೆ ಐಸಿಸಿ ಬುಲಾವ್ ನೀಡಿತ್ತು. ಪಾಕ್ ವಿರುದ್ಧದ ಗೆಲುವನ್ನು ಸೂರ್ಯ ಭಾರತೀಯ ಸೇನಗೆ ಅರ್ಪಿಸಿದ್ದರು. ಹೀಗಾಗಿ ರಾಜಕೀಯ ಅರ್ಥ ಬರುವಂತಹ ಹೇಳಿಕೆಗಳನ್ನು ನೀಡದಂತೆ ಸೂರ್ಯಗೆ ಎಚ್ಚರಿಕೆ ನೀಡಿದೆ.

ಎರಡನೇ ಪಂದ್ಯದಲ್ಲಿ ಪಾಕ್ ಆಟಗಾರರು ಭಾರತೀಯ ಸೇನೆಯನ್ನು ಅಣಕಿಸುವಂತೆ ಸಂಜ್ಞೆಗಳನ್ನು ಮಾಡಿದ್ದರು. ಇದರ ವಿರುದ್ಧ ಬಿಸಿಸಿಐ, ಐಸಿಸಿಗೆ ದೂರು ನೀಡಿತ್ತು. ಈ ಸಂಬಂಧ ಅರ್ಧಶತಕ ದಾಖಲಿಸಿದ ಬಳಿಕ ಬ್ಯಾಟ್ ನ್ನು ಗನ್ ನಂತೆ ಹಿಡಿದ ಫರ್ಹಾನ್ ಮತ್ತು ಆರು ರಾಫೇಲ್ ಜೆಟ್ ಹೊಡೆದು ಹಾಕಿದ್ದೇವೆ ಎಂಬಂತೆ ಸನ್ನೆ ಮಾಡಿದ್ದ ಹ್ಯಾರಿಸ್ ರೌಫ್ ರನ್ನು ಐಸಿಸಿ ವಿಚಾರಣೆ ನಡೆಸಿದೆ.

ಈ ವೇಳೆ ಫರ್ಹಾನ್ ತನ್ನದು ತಪ್ಪಿಲ್ಲ, ಇದು ನಮ್ಮ ಸಮುದಾಯದವರ ಸಾಂಪ್ರದಾಯಿಕ ಸೆಲೆಬ್ರೇಷನ್ ಶೈಲಿಯಷ್ಟೇ. ಈ ಹಿಂದೆ ಧೋನಿ, ಕೊಹ್ಲಿ ಕೂಡಾ ಇದೇ ರೀತಿ ಬ್ಯಾಟ್ ಗನ್ ನಂತೆ ಹಿಡಿದು ಸೆಲೆಬ್ರೇಷನ್ ಮಾಡಿದ್ದರು ಎಂದು ವಾದಿಸಿದ್ದಾರೆ. ಇನ್ನು, ಹ್ಯಾರಿಸ್ ರೌಫ್ ನಾನು ಭಾರತೀಯ ಸೇನೆಯ ಕುರಿತಾಗಿ ಈ ರೀತಿ ಸಂಜ್ಞೆ ಮಾಡಿರಲಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಆದರೆ ಈ ಇಬ್ಬರೂ ಆಟಗಾರರ ತಪ್ಪು ಪರಿಗಣಿಸಿ ಐಸಿಸಿ ಈಗ ದಂಡ ವಿಧಿಸುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ