ಟಿ20 ವಿಶ್ವಕಪ್ 2024: ಅಫ್ಘಾನಿಸ್ತಾನದ ವಿರುದ್ಧ ಟೀಂ ಇಂಡಿಯಾ ಕೈ ಹಿಡಿದ ಬೌಲರ್ ಗಳು

Krishnaveni K

ಶುಕ್ರವಾರ, 21 ಜೂನ್ 2024 (08:57 IST)
ಬಾರ್ಬಡೋಸ್: ಟಿ20 ವಿಶ್ವಕಪ್ ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಟೀಂ ಇಂಡಿಯಾ 47 ರನ್ ಗಳಿಂದ ಗೆಲುವು ಪಡೆದುಕೊಂಡಿದೆ. ಟೀಂ ಇಂಡಿಯಾ ಬೌಲರ್ ಗಳು ಮತ್ತೊಮ್ಮೆ ತಮ್ಮ ಪರಾಕ್ರಮ ತೋರಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು. ಆರಂಭದಲ್ಲೇ ರೋಹಿತ್ ಶರ್ಮಾ (8) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಈ ವೇಳೆ ನಿಧಾನಗತಿಯ ಆಟಕ್ಕೆ ಕೈ ಹಾಕಿದ ವಿರಾಟ್ ಕೊಹ್ಲಿ 24 ಎಸೆತಗಳಲ್ಲಿ 24 ರನ್ ಗಳಿಸಿದರು. ಇನ್ನೊಂದೆಡೆ ರಿಷಬ್ ಪಂತ್ ಹೊಡೆಬಡಿಯ ಆಟಕ್ಕೆ ಕೈ ಹಾಕಿ 11 ಎಸೆತಗಳಿಂದ 20 ರನ್ ಗಳಿಸಿ ಔಟಾದರು. ಈ ವೇಳೆ ತಂಡಕ್ಕೆ ಆಸರೆಯಾದ ಸೂರ್ಯಕುಮಾರ್ ಯಾದವ್ 28 ಎಸೆತಗಳಿಂದ 53 ರನ್ ಚಚ್ಚಿದರೆ ಹಾರ್ದಿಕ್ ಪಾಂಡ್ಯ 24 ಎಸೆತಗಳಿಂದ 32 ರನ್ ಗಳಿಸಿದರು. ಶಿವಂ ದುಬೆ 10 ರನ್ ಗಳಿಸಿ ಮತ್ತೊಮ್ಮೆ ವಿಫಲರಾದರು. ಅಫ್ಘಾನಿಸ್ತಾನ ಪರ ಫಾರೂಖಿ ಮತ್ತು ರಶೀದ್ ಖಾನ್ ತಲಾ 3 ವಿಕೆಟ್ ಕಬಳಿಸಿದರು.

ಈ ಮೊತ್ತ ಬೆನ್ನತ್ತಿದ ಅಫ್ಘಾನಿಸ್ತಾನಕ್ಕೆ ಟೀಂ ಇಂಡಿಯಾ ಬೌಲರ್ ಗಳು ಆಘಾತವಿಕ್ಕಿದರು. 71 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡ ಅಫ್ಘಾನಿಸ್ತಾನದ ಆಗಲೇ ಸೋಲಿಗೆ ಮುನ್ನುಡಿ ಬರೆದಿತ್ತು. ಒಮ್ರಾಝಿ 26 ರನ್ ಗಳಿಸಿದರು. ಭಾರತದ ಪರ ಜಸ್ಪ್ರೀತ್ ಬುಮ್ರಾ ಪ್ರಮುಖ 3 ವಿಕೆಟ್ ಕಬಳಿಸಿ ಅಫ್ಘಾನಿಸ್ತಾನದ ತಲೆ ಕತ್ತರಿಸಿದರೆ ಅರ್ಷ್ ದೀಪ್ ಸಿಂಗ್ ಕೊನೆಯ 3 ವಿಕೆಟ್ ಕಬಳಿಸಿ ಬಾಲ ಕತ್ತರಿಸಿದರು. ಮಧ್ಯಮ ಕ್ರಮಾಂಕದ ಕುಲದೀಪ್ ಯಾದವ್ 2, ಅಕ್ಸರ್ ಪಟೇಲ್ 1 ವಿಕೆಟ್ ಕಬಳಿಸಿ ಕಡಿವಾಣ ಹಾಕಿದರು.

ಅಂತಿಮವಾಗಿ ಅಫ್ಘಾನಿಸ್ತಾನ 20 ಓವರ್ ಗಳಲ್ಲಿ 134 ರನ್ ಗಳಿಗೆ ಆಲೌಟ್ ಆಯಿತು. ಈ ಗೆಲುವಿನೊಂದಿಗೆ ಒಂದನೇ ಗುಂಪಿನಲ್ಲಿ ಸೂಪರ್ 8 ಹಂತದಲ್ಲಿ ಟೀಂ ಇಂಡಿಯಾ ಅಗ್ರಸ್ಥಾನಿಯಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ