T20 WC 2024: ವೆಸ್ಟ್ ಇಂಡೀಸ್ ವಿರುದ್ಧ ಸೋತ ಯುಎಸ್ ಎ ಸೆಮಿಫೈನಲ್ ಕನಸು ಭಗ್ನ

Krishnaveni K

ಶನಿವಾರ, 22 ಜೂನ್ 2024 (09:27 IST)
ಬಾರ್ಬಡೋಸ್: ಟಿ20 ವಿಶ್ವಕಪ್ ರ ಇಂದಿನ ಸೂಪರ್ 8 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 9 ವಿಕೆಟ್ ಗಳಿಂದ ಸೋತ ಯುಎಸ್ ಎ ಸೆಮಿಫೈನಲ್ ಹಾದಿ ಹೆಚ್ಚು ಕಡಿಮೆ ಬಂದ್ ಆಗಿದೆ.

ಈ ಸೋಲಿನೊಂದಿಗೆ ಸೂಪರ್ 8 ಹಂತದಲ್ಲಿ ಎರಡೂ ಪಂದ್ಯ ಸೋತ ಯುಎಸ್ ಎ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಜಾರಿತು. ಮೊದಲು ಬ್ಯಾಟಿಂಗ್ ಮಾಡಿದ ಯುಎಸ್ ಎ 19.5 ಓವರ್ ಗಳಲ್ಲಿ 128 ರನ ಗಳಿಗೆ ಆಲೌಟ್ ಆಯಿತು. ಆಂಡ್ರಿಸ್ ಗೋಸ್ 29, ಎನ್ ಆರ್ ಕುಮಾರ್ 20 ರನ್ ಗಳಿಸಿದರು. ವಿಂಡೀಸ್ ಪರ ರಸೆಲ್, ರೋಸ್ಟನ್ ತಲಾ 3, ಜೊಸೆಫ್ 2 ಕಬಳಿಸಿದರು.

ಈ ಮೊತ್ತ ಬೆನ್ನತ್ತಿದ ವೆಸ್ಟ್ ಇಂಡೀಸ್ ಗೆ ಶೈ ಹೋಪ್ ಸಿಡಿಲಬ್ಬರದ ಬ್ಯಾಟಿಂಗ್ ನಿಂದ ಕೊನೆಯವರೆಗೆ ಅಜೇಯರಾಗುಳಿದು ಗೆಲುವು ಕೊಡಿಸಿದರು. ಒಟ್ಟು 39 ಎಸೆತ ಎದುರಿಸಿದ ಹೋಪ್ 8 ಸಿಕ್ಸರ್ ಸಹಿತ 82 ರನ್ ಸಿಡಿಸಿದರು. ಇವರಿಗೆ ಸಾಥ್ ನೀಡಿದ ನಿಕಲಸ್ ಪೂರನ್ 12 ಎಸೆತಗಳಿಂದ 27 ರನ್ ಚಚ್ಚಿದರು. ಜಾನ್ಸನ್ ಚಾರ್ಲ್ಸ್ ಕೇವಲ 15 ರನ್ ಗಳ ಕೊಡುಗೆ ನೀಡಿದರು. ಅಂತಿಮವಾಗಿ ವಿಂಡೀಸ್ 10.5 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿತು.

ಈ ಗೆಲುವಿನೊಂದಿಗೆ ವೆಸ್ಟ್ ಇಂಡೀಸ್ ಎರಡನೇ ಗುಂಪಿನಲ್ಲಿ ಎರಡನೇ ಸ್ಥಾನಕ್ಕೇರಿತು. ಕಳೆದ ಪಂದ್ಯ  ಸೋತಿದ್ದ ವಿಂಡೀಸ್ ಗೆ ಈ ಪಂದ್ಯ ಗೆಲ್ಲುವುದು ಅನಿವಾರ್ಯವಾಗಿತ್ತು. ಅದನ್ನೂ ಉತ್ತಮ ರನ್ ರೇಟ್ ನೊಂದಿಗೆ ಗೆದ್ದಿರುವುದರಿಂದ ಮುಂದಿನ ಹಂತಕ್ಕೇರಲು ಸಹಾಯವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ