ಬಾರ್ಬಡೋಸ್: ಟಿ20 ವಿಶ್ವಕಪ್ ನಲ್ಲಿ ಸೂಪರ್ 8 ಪಂದ್ಯಗಳು ನಿನ್ನೆಯಿಂದ ಆರಂಭವಾಗಿದ್ದು ಟೀಂ ಇಂಡಿಯಾ ಮೊದಲ ಪಂದ್ಯವನ್ನು ಅಫ್ಘಾನಿಸ್ತಾನ ವಿರುದ್ಧ ಆಡಲಿದೆ.
ಲೀಗ್ ಹಂತದಲ್ಲಿ ಎ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಸೂಪರ್ 8 ಕ್ಕೆ ಲಗ್ಗೆಯಿಟ್ಟಿದ್ದ ಭಾರತಕ್ಕೆ ಇಂದು ಅಫ್ಘಾನಿಸ್ತಾನ ಎದುರಾಳಿಯಾಗಿದೆ. ಈ ಟಿ20 ವಿಶ್ವಕಪ್ ನಲ್ಲಿ ಆರಂಭಿಕ ಪಂದ್ಯಗಳನ್ನು ಅಮೆರಿಕಾದಲ್ಲಿ ಆಡಿದ್ದ ಭಾರತ ಇದೀಗ ವೆಸ್ಟ್ ಇಂಡೀಸ್ ನಲ್ಲಿ ಮುಂದಿನ ಪಂದ್ಯಗಳನ್ನು ಆಡುತ್ತಿದೆ. ವಿಂಡೀಸ್ ಪಿಚ್ ಗಳಲ್ಲಿ ಆಡಿದ ಅನುಭವವಿರುವ ಕಾರಣ ಟೀಂ ಇಂಡಿಯಾ ಇನ್ನಷ್ಟು ಉತ್ತಮ ಪ್ರದರ್ಶನ ನೀಡಬಹುದು ಎಂಬ ವಿಶ್ವಾಸವಿದೆ.
ಟೀಂ ಇಂಡಿಯಾಕ್ಕಿರುವ ದೊಡ್ಡ ತಲೆನೋವು ಎಂದರೆ ವಿರಾಟ್ ಕೊಹ್ಲಿ ಫಾರ್ಮ್. ಆತ ಕ್ಲಾಸ್ ಪ್ಲೇಯರ್, ಜೊತೆಗೆ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ. ಆದರೆ ಕೊಹ್ಲಿ ಬೇಗನೇ ಔಟಾಗುತ್ತಿರುವುದರಿಂದ ಕೆಳ ಕ್ರಮಾಂಕದ ಮೇಲೆ ಒತ್ತಡ ಬೀಳುತ್ತಿದೆ. ಜೊತೆಗೆ ನಾಯಕ ರೋಹಿತ್ ಶರ್ಮಾ ಕೂಡಾ ಆರಂಭಿಕ ಪಂದ್ಯದಲ್ಲಿ ಬಿಟ್ಟರೆ ಉಳಿದ ಎರಡು ಪಂದ್ಯಗಳಲ್ಲಿ ವಿಫಲರಾಗಿದ್ದರು. ಭಾರತ ಮುಖ್ಯವಾಗಿ ಈ ಹುಳುಕನ್ನು ಸರಿಪಡಿಸಬೇಕಿದೆ. ಆದರೆ ಬೌಲಿಂಗ್ ನಲ್ಲಿ ಭಾರತ ಯಾವುದೇ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ. ಇದುವರೆಗೆ ಎಲ್ಲಾ ಪಂದ್ಯಗಳಲ್ಲೂ ಬೌಲರ್ ಗಳು ಉತ್ತಮ ಪ್ರದರ್ಶನ ನೀಡಿದ್ದರು.
ಇತ್ತ ಅಫ್ಘಾನಿಸ್ತಾನ ದುರ್ಬಲ ತಂಡವೇನಲ್ಲ. ಟಿ20 ಕ್ರಿಕೆಟ್ ನಲ್ಲಿ ಅನೇಕ ಅಚ್ಚರಿಯ ಫಲಿತಾಂಶ ನೀಡಿದ ಉದಾಹರಣೆಯಿದೆ, ಆ ಸಾಮರ್ಥ್ಯವೂ ತಂಡಕ್ಕಿದೆ. ರಶೀದ್ ಖಾನ್, ನವೀನ್ ಉಲ್ ಹಕ್ ರಂತಹ ಅನುಭವಿ ಆಟಗಾರರ ಬಲವಿದೆ. ಈ ಇಬ್ಬರೂ ಆಟಗಾರರಿಗೆ ಐಪಿಎಲ್ ನಲ್ಲಿ ಆಡಿದ ಅನುಭವವಿದೆ. ಹೀಗಾಗಿ ಎದುರಾಳಿಯನ್ನು ಭಾರತ ಖಂಡಿತಾ ಹಗುರವಾಗಿ ಕಾಣುವಂತಿಲ್ಲ. ಈ ಪಂದ್ಯ ಬಾರ್ಬಡೋಸ್ ಮೈದಾನದಲ್ಲಿ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8 ಗಂಟೆಗೆ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಅಥವಾ ಹಾಟ್ ಸ್ಟಾರ್ ಆಪ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.