ಸೈಂಟ್ ಲೂಸಿಯಾ: ಟಿ20 ವಿಶ್ವಕಪ್ ನಲ್ಲಿ ಇಂದಿನ ಸೂಪರ್ 8 ಹಂತದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಫಿಲಿಪ್ ಸಾಲ್ಟ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ನಿಂದಾಗಿ ಇಂಗ್ಲೆಂಡ್ 8 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಅತಿಥೇಯ ವಿಂಡೀಸ್ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತು. ವಿಂಡೀಸ್ ಪರ ಟಾಪ್ ಬ್ಯಾಟಿಗರು ಎಲ್ಲರಿಂದ ಕೊಡುಗೆ ಸಿಕ್ಕಿತು. ಬ್ರೆಂಡನ್ ಕಿಂಗ್ 23 ರನ್ ಗಳಿಸಿ ಗಾಯದಿಂದ ನಿವೃತ್ತಿಯಾದರೆ, ಚಾರ್ಲ್ಸ್ 38, ನಿಕಲಸ್ ಪೂರನ್, ರೊವ್ಮನ್ ಪೊವೆಲ್ ತಲಾ 36 ರನ್ ಗಳಿಸಿದರು. ಕೊನೆಯಲ್ಲಿ ರುದರ್ ಫೋರ್ಡ್ 15 ಎಸೆತಗಳಿಂದ ಅಜೇಯ 28 ರನ್ ಸಿಡಿಸಿದರು.
ಈ ಮೊತ್ತ ಬೆನ್ನತ್ತಿದ ಇಂಗ್ಲೆಂಡ್ ಗೆ ಆರಂಭಿಕ ಫಿಲಿಪ್ ಸಾಲ್ಟ್ ಅಬ್ಬರದ ಆರಂಭ ನೀಡಿದರು. 47 ಎಸೆತ ಎದುರಿಸಿದ ಅವರು 5 ಸಿಕ್ಸರ್ 7 ಬೌಂಡರಿಗಳ ನೆರವಿನೊಂದಿಗೆ ಅಜೇಯ 87 ರನ್ ಸಿಡಿಸಿದರು. ಅವರಿಗೆ ಸಾಥ್ ನೀಡಿದ ಜೋಸ್ ಬಟ್ಲರ್ 25, ಜಾನಿ ಬೇರ್ ಸ್ಟೋ ಔಟಾಗದೇ 48 ರನ್ ಗಳಿಸಿದರು.
ಅಂತಿಮವಾಗಿ ಇಂಗ್ಲೆಂಡ್ 15 ಎಸೆತ ಬಾಕಿ ಇರುವಂತೆಯೇ 2 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಈ ಗೆಲುವಿನೊಂದಿಗೆ ಇಂಗ್ಲೆಂಡ್ ಸೂಪರ್ 8 ಹಂತದ ಮೊದಲ ಪಂದ್ಯದಲ್ಲೇ ಶುಭಾರಂಭ ಮಾಡಿದಂತಾಗಿದೆ. ಅತ್ತ ವಿಂಡೀಸ್ ಸತತ ಗೆಲುವಿನ ಬಳಿಕ ಸೋಲಿನ ಆಘಾತ ಅನುಭವಿಸಿದಂತಾಗಿದೆ.