ಟಿ20 ವಿಶ್ವಕಪ್: ಹೀನಾಯ ಸೋಲಿನೊಂದಿಗೆ ಕೂಟದಿಂದ ಹೊರಬಿದ್ದ ಟೀಂ ಇಂಡಿಯಾ
ಟಾಸ್ ಸೋತಿದ್ದೇ ನಿರ್ಣಾಯಕವಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಎಂದಿನಂತೆ ಆರಂಭಿಕರು ಕೈಕೊಟ್ಟರು. ವಿರಾಟ್ ಕೊಹ್ಲಿ 50, ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಬಿರುಸಿನ 63 ರನ್ ಗಳಿಸಿದ್ದರಿಂದ ಭಾರತದ ಮೊತ್ತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ಆಗಿತ್ತು.
ಈ ಮೊತ್ತ ಬೆನ್ನತ್ತಿದ್ದ ಇಂಗ್ಲೆಂಡ್ ಗೆ ಭಾರತೀಯ ಬೌಲರ್ ಗಳು ಯಾವುದೇ ಹಂತದಲ್ಲೂ ಸವಾಲಾಗಲೇ ಇಲ್ಲ. ಜೋಸ್ ಬಟ್ಲರ್-ಅಲೆಕ್ಸ್ ಹೇಲ್ಸ್ ಜೋಡಿ ಮನಸೋ ಇಚ್ಛೆ ದಂಡಿಸಿ 16 ಓವರ್ ಗಳಲ್ಲೇ ಒಂದೇ ಒಂದು ವಿಕೆಟ್ ಕಳೆದುಕೊಳ್ಳದೇ 170 ರನ್ ಗಳಿಸಿ ತಂಡಕ್ಕೆ ಗೆಲುವು ಕೊಡಿಸಿದರು. ಬಟ್ಲರ್ ಅಜೇಯ 80, ಅಲೆಕ್ಸ್ ಅಜೇಯ 86 ರನ್ ಗಳಿಸಿದರು. ಭಾರತೀಯ ಬೌಲರ್ ಗಳ ಪೈಕಿ ಭುವನೇಶ್ವರ್ ಕುಮಾರ್ 2 ಓವರ್ ಗಳಲ್ಲಿ 25 ರನ್ ನೀಡಿದರೆ ರವಿಚಂದ್ರನ್ ಅಶ್ವಿನ್ 2 ಓವರ್ ಗಳಲ್ಲಿ 27 ರನ್ ಬಿಟ್ಟುಕೊಟ್ಟು ದುಬಾರಿ ಎನಿಸಿದರು. ಯಾರೊಬ್ಬರನ್ನೂ ಬಿಡದೇ ದಂಡಿಸಿದ ಇಂಗ್ಲೆಂಡ್ ಬ್ಯಾಟಿಗರು ಟೀಂ ಇಂಡಿಯಾಗೆ ಮುಖಭಂಗ ಮಾಡಿದ್ದಾರೆ. ಇದರೊಂದಿಗೆ ಇಂಗ್ಲೆಂಡ್ ಪಾಕಿಸ್ತಾನ ವಿರುದ್ಧ ಫೈನಲ್ಸ್ ನಲ್ಲಿ ಆಡುವಂತಾಗಿದೆ. ಭಾರತ-ಪಾಕ್ ಫೈನಲ್ ಆಡುತ್ತದೆ ಎಂಬ ಕನಸು ಕನಸಾಗಿಯೇ ಉಳಿಯಿತು.