ಬಾರ್ಬಡೋಸ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದು ಎಲ್ಲರೂ ಕುತೂಹಲದಿಂದ ಎದಿರು ನೋಡುತ್ತಿರುವ ಟಿ20 ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಆದರೆ ಈ ಪಂದ್ಯವನ್ನು ನೆಮ್ಮದಿಯಾಗಿ ನೋಡಲು ಮಳೆರಾಯ ಬಿಡುವುದು ಅನುಮಾನವಾಗಿದೆ.
ಟಿ20 ವಿಶ್ವಕಪ್ ನಲ್ಲಿ ಈ ಬಾರಿ ಅನೇಕ ಪಂದ್ಯಗಳು ಮಳೆಯ ಅಡಚಣೆಯ ನಡುವೆಯೇ ನಡೆದಿದೆ. ಭಾರತ ಆಡಬೇಕಿದ್ದ ಕೊನೆಯ ಲೀಗ್ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಸೂಪರ್ 8 ಪಂದ್ಯಗಳೂ ಮಳೆ ಭೀತಿಯಲ್ಲೇ ನಡೆದಿತ್ತು. ಸೆಮಿಫೈನಲ್ ಪಂದ್ಯದ ವೇಳೆಯೂ ವರುಣನ ಆಗಮನವಾಗಿತ್ತು.
ಇದೀಗ ಫೈನಲ್ ಪಂದ್ಯ ಬಾರ್ಬಡೋಸ್ ನಲ್ಲಿ ನಡೆಯಲಿದ್ದು, ಇಲ್ಲೂ ಮಳೆಯಾಗುವ ಸಾಧ್ಯತೆ ಶೇ.70 ರಷ್ಟಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಇಂದಿನ ಪಂದ್ಯವೂ ತಡೆಯಿಲ್ಲದೇ ನಡೆಯುವುದು ಅನುಮಾನವಾಗಿದೆ. ಆದರೆ ಒಂದು ಸಮಾಧಾನವೆಂದರೆ ಫೈನಲ್ ಪಂದ್ಯಕ್ಕೆ ಮೀಸಲು ದಿನ ನಿಗದಿಗೊಳಿಸಲಾಗಿದೆ.
ಒಂದು ವೇಳೆ ಮೀಸಲು ದಿನವೂ ಮಳೆಯಾದರೆ ಭಾರತ ಮತ್ತು ದಕ್ಷಿಣ ಆಫ್ರಿಕಾವನ್ನು ಜಂಟಿ ವಿಜೇತರೆಂದು ತೀರ್ಮಾನಿಸಬೇಕಾಗುತ್ತದೆ. ಈ ಬಾರಿಯ ವಿಶ್ವಕಪ್ ನಲ್ಲಿ ಎರಡೂ ತಂಡಗಳೂ ಇದುವರೆಗೆ ಒಂದೇ ಒಂದು ಪಂದ್ಯ ಸೋತಿಲ್ಲ. ಹೀಗಾಗಿ ಈ ಪಂದ್ಯವೂ ನಡೆದು ಸರಿಯಾದ ಫಲಿತಾಂಶ ಸಿಕ್ಕರಷ್ಟೇ ಟೂರ್ನಿಗೆ ನ್ಯಾಯ ಸಿಗಲಿದೆ.