ಬಾರ್ಬಡೋಸ್: ಟಿ20 ವಿಶ್ವಕಪ್ ನಲ್ಲಿ ಇಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಎರಡೂ ತಂಡಗಳಿಗೂ ಈಗ ಕಪ್ ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ. ಇದಕ್ಕೆ ಕಾರಣವೂ ಇದೆ.
ಟೀಂ ಇಂಡಿಯಾ ಕಳೆದ 10 ವರ್ಷಗಳಿಂದ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಟಿ20 ವಿಶ್ವಕಪ್ ನ ಆರಂಭಿಕ ಟೂನಿರ್ಯಲ್ಲಿ ಪ್ರಶಸ್ತಿ ಗೆದ್ದಿದ್ದ ಭಾರತ ಬಳಿಕ ಒಮ್ಮೆ ಫೈನಲ್ ಗೇರಿದ್ದರೂ ಸೋಲು ಕಂಡಿತ್ತು. ಇದೀಗ ಮೂರನೇ ಬಾರಿಗೆ ಟಿ20 ವಿಶ್ವಕಪ್ ಫೈನಲ್ ಗೇರಿದೆ. ಕಳೆದ ಮೂರು ಐಸಿಸಿ ಪ್ರಶಸ್ತಿ ಟೂರ್ನಿಗಳಲ್ಲಿ ಸತತವಾಗಿ ಭಾರತ ಫೈನಲ್ ಗೇರಿದರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ.
ಹೀಗಾಗಿ ಭಾರತವನ್ನೂ ಕೆಲವರು ದಶಕದ ಚೋಕರ್ಸ್ ಎಂದು ಲೇವಡಿ ಮಾಡಲು ಪ್ರಾರಂಭಿಸಿದ್ದಾರೆ. ಆ ಹಣೆ ಪಟ್ಟಿ ತೊಡೆದು ಹಾಕಬೇಕಾದರೆ ಇಂದು ಭಾರತ ಗೆಲ್ಲಲೇಬೇಕು. ಅಲ್ಲದೆ, ಭಾರತಕ್ಕೆ ಒಂದು ವಿಶ್ವಕಪ್ ಆದರೂ ಗೆದ್ದೇ ಕೊಡುವೆ ಎಂದು ಛಲ ಹೊತ್ತಿರುವ ನಾಯಕ ರೋಹಿತ್ ಶರ್ಮಾ ಈ ಪಂದ್ಯವನ್ನು ಗೆಲ್ಲಲು ಎಲ್ಲಾ ರೀತಿಯ ಪ್ರಯತ್ನ ನಡೆಸುವುದು ಖಂಡಿತಾ. ಇದುವರೆಗೆ ಭಾರತ ಸೋಲೇ ಅರಿಯದೇ ಟೂರ್ನಿಯಲ್ಲಿ ಸಾಗಿಬಂದಿದ್ದು ಈ ಪಂದ್ಯಕ್ಕೂ ಬದಲಾವಣೆ ಸಾಧ್ಯತೆಯಿಲ್ಲ.
ಇತ್ತ ದಕ್ಷಿಣ ಆಫ್ರಿಕಾಗೆ ಇದು ಮೊದಲ ಐಸಿಸಿ ಟ್ರೋಫಿ ಫೈನಲ್. ಇದುವರೆಗೆ ಚೋಕರ್ಸ್ ಹಣೆ ಪಟ್ಟಿ ಹೊತ್ತಿದ್ದ ಆಫ್ರಿಕಾ ನಾಕೌಟ್ ಹಂತದಲ್ಲೇ ಸೋತು ನಗೆಪಾಟಲಿಗೀಡಾಗುತ್ತಿತ್ತು. ಆದರೆ ಈ ಬಾರಿ ಆ ಕಳಂಕ ತೊಡೆದು ಹಾಕುವ ವಿಶ್ವಾಸದಲ್ಲಿದೆ. ಹೀಗಾಗಿ ಇಂದು ಪಂದ್ಯ ನಡೆದು ಫಲಿತಾಂಶ ಬರಲಿ ಎಂಬುದೇ ಕ್ರಿಕೆಟ್ ಪ್ರೇಮಿಗಳ ಪ್ರಾರ್ಥನೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.