ಟಿ20 ವಿಶ್ವಕಪ್ ಪಂದ್ಯಾವಳಿಯ ನೇರಪ್ರಸಾರ ಎಲ್ಲಿ, ಎಷ್ಟು ಹೊತ್ತಿಗೆ ನೋಡಬಹುದು

Krishnaveni K

ಗುರುವಾರ, 30 ಮೇ 2024 (11:50 IST)
ಮುಂಬೈ: ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇದೇ ಭಾನುವಾರ ಜೂನ್ 2 ರಿಂದ ಟಿ20 ವಿಶ್ವಕಪ್ ಗೆ ಅಧಿಕೃತ ಚಾಲನೆ ಸಿಗಲಿದೆ.

ಈ ಬಾರಿ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ನ ಆತಿಥ್ಯದಲ್ಲಿ ಟೂರ್ನಮೆಂಟ್ ನಡೆಯುತ್ತಿದೆ. ಜೂನ್ 2 ರಂದು ಆರಂಭಿಕ ಪಂದ್ಯ ಡಲ್ಲಾಸ್ ಮೈದಾನದಲ್ಲಿ ಅತಿಥೇಯ ಯುಎಸ್ ಎ ಮತ್ತು ಕೆನಡಾ ಮಧ್ಯೆ ನಡೆಯಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ನ್ಯೂಯಾರ್ಕ್ ನಲ್ಲಿ ಐರ್ಲೆಂಡ್ ವಿರುದ್ಧ ಆಡಲಿದೆ.

ಎಲ್ಲಾ ಪಂದ್ಯಗಳು ರಾತ್ರಿ 8 ಗಂಟೆ, ಅಪರಾಹ್ನ 4.30, ಬೆಳಗಿನ ಜಾವ 5 ಗಂಟೆ,  ಬೆಳಿಗ್ಗೆ 6.00 ಮತ್ತು 9.30 ಗಂಟೆಯ ವೇಳೆಗೆ ನಡೆಯಲಿದೆ. ಭಾರತ ಆಡಲಿರುವ ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯ ರಾತ್ರಿ 8 ಗಂಟೆಗೆ ನಡೆಯಲಿದೆ.

2007 ರಲ್ಲಿ ಚೊಚ್ಚಲ ಆವೃತ್ತಿಯಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದಿತ್ತು. ಆದರೆ ಅದಾದ ಬಳಿಕ ಭಾರತಕ್ಕೆ ಕಪ್ ಗೆಲ್ಲಲಾಗಲೇ ಇಲ್ಲ. ಕಳೆದ ಬಾರಿಯೂ ಸೆಮಿಫೈನಲ್ ಹಂತದಲ್ಲೇ ನಿರ್ಗಮಿಸಿತ್ತು. ಆದರೆ ಈ ಬಾರಿಯಾದರೂ ಕಪ್ ಗೆಲ್ಲಬಹುದು ಎಂಬ ನಿರೀಕ್ಷೆ ಅಭಿಮಾನಿಗಳದ್ದು. ಕೊನೆಯ ಬಾರಿಗೆ 2022 ರಲ್ಲಿ ನಡೆದ ಟಿ20 ವಿಶ್ವಕಪ್ ನ್ನು ಇಂಗ್ಲೆಂಡ್ ಗೆದ್ದುಕೊಂಡಿತ್ತು. ಇದುವರೆಗೆ ಇಂಗ್ಲೆಂಡ್ ಮಾತ್ರ ಎರಡು ಬಾರಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ.

ಈ ಬಾರಿ ಟಿ20 ವಿಶ್ವಕಪ್ ಪಂದ್ಯಾವಳಿಯ ಎಲ್ಲಾ ಪಂದ್ಯಗಳ ನೇರಪ್ರಸಾರವನ್ನು ಭಾರತದಲ್ಲಿ ಡಿಸ್ನಿ ಹಾಟ್ ಸ್ಟಾರ್ ಆಪ್ ಅಥವಾ ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್ ವಾಹಿನಿಯಲ್ಲಿ ವೀಕ್ಷಿಸಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ