ಟ್ರಿನಿಡಾಡ್: ಪಪುವಾ ನ್ಯೂಗಿನಿ ತಂಡವನ್ನು ಸುಲಭವಾಗಿ 7 ವಿಕೆಟ್ ಗಳಿಂದ ಸೋಲಿಸಿದ ನ್ಯೂಜಿಲೆಂಡ್ ಕೊನೆಯ ಲೀಗ್ ಪಂದ್ಯದಲ್ಲಿ ಗೆಲುವಿನೊಂದಿಗೆ ಈ ಟಿ20 ವಿಶ್ವಕಪ್ ಯಾತ್ರೆ ಮುಗಿಸಿದೆ.
ಇಂದು ಕೊನೆಯ ಹಂತದ ಲೀಗ್ ಪಂದ್ಯಗಳು ನಡೆಯುತ್ತಿವೆ. ಅದರಂತೆ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಪುವಾ ತಂಡ 19.4 ಓವರ್ ಗಳಲ್ಲಿ 78 ರನ್ ಗಳಿಗೆ ಆಲೌಟ್ ಆಯಿತು. ಮಾರಕ ದಾಳಿ ಸಂಘಟಿಸಿದ ಲೂಕಿ ಫರ್ಗ್ಯುಸನ್ 3 ವಿಕೆಟ್ ಕಿತ್ತರೆ ಟ್ರೆಂಟ್ ಬೌಲ್ಟ್, ಟಿಮ್ ಸೌಥಿ, ಇಶ್ ಸೋಧಿ ತಲಾ 2 ವಿಕೆಟ್ ಕಬಳಿಸಿದರು.
ಈ ಮೊತ್ತ ಬೆನ್ನತ್ತಿದ ನ್ಯೂಜಿಲೆಂಡ್ 12.2 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 79 ರನ್ ಗಳಿಸುವ ಮೂಲಕ ಸುಲಭ ಗೆಲುವು ದಾಖಲಿಸಿತು. ಆರಂಭಿಕ ಫಿನ್ ಅಲೆನ್ ಶೂನ್ಯಕ್ಕೆ ನಿರ್ಗಮಿಸಿದರೆ ಇನ್ನೊಬ್ಬ ಆರಂಭಿಕ ಕಾನ್ವೆ 35, ರಚಿನ್ ರವೀಂದ್ರ 6, ಕೇನ್ ವಿಲಿಯಮ್ಸನ್ ಅಜೇಯ 18, ಡೆರಿಲ್ ಮಿಚೆಲ್ ಅಜೇಯ 19 ರನ್ ಗಳಿಸಿದರು.
ಈ ಪಂದ್ಯದ ಫಲಿತಾಂಶ ಉಭಯ ತಂಡಗಳ ಮೇಲೂ ಯಾವುದೇ ಪರಿಣಾಮ ಬೀರಲ್ಲ. ಯಾಕೆಂದರೆ ಈ ಟಿ20 ವಿಶ್ವಕಪ್ ನಿಂದ ಈಗಾಗಲೇ ಎರಡೂ ತಂಡಗಳು ಹೊರಬಿದ್ದಿವೆ. ಇದು ಎರಡೂ ತಂಡಕ್ಕೂ ಔಪಚಾರಿಕ ಪಂದ್ಯವಾಗಿತ್ತು. ಈಗಾಗಲೇ ಸೂಪರ್ 8 ಕ್ಕೇರಿದ ತಂಡಗಳು ಯಾವುವು ಎಂದು ನಿರ್ಧಾರವಾಗಿದೆ.