T20 World Cup 2024: ಭಾರತ-ಕೆನಡಾ ಔಪಚಾರಿಕ ಪಂದ್ಯದ ಮೇಲೆ ಮಳೆಯ ಕಾರ್ಮೋಡ

Krishnaveni K

ಶನಿವಾರ, 15 ಜೂನ್ 2024 (11:07 IST)
ಫ್ಲೋರಿಡಾ: ಟಿ20 ವಿಶ್ವಕಪ್ 2024 ರಲ್ಲಿ ಇಂದು ಟೀಂ ಇಂಡಿಯಾ ಮತ್ತು ಕೆನಡಾ ನಡುವೆ ಔಪಚಾರಿಕ ಪಂದ್ಯ ನಡೆಯಲಿದೆ. ಆದರೆ ಈ ಪಂದ್ಯದ ಮೇಲೆ ಮಳೆಯ ಕಾರ್ಮೋಡ ಕವಿದಿದೆ.

ಫ್ಲೋರಿಡಾದಲ್ಲಿ ನಿನ್ನೆ ನಡೆಯಬೇಕಿದ್ದ ಅಮೆರಿಕಾ ಮತ್ತು ಐರ್ಲೆಂಡ್ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಇಂದೂ ಕೂಡಾ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಹೀಗಾಗಿ ಇಂದಿನ ಪಂದ್ಯ ರದ್ದಾದರೆ ಎರಡೂ ತಂಡಗಳು ಅಂಕ ಸಮನಾಗಿ ಹಂಚಿಕೊಳ್ಳಲಿವೆ. ಆದರೆ ಇದರಿಂದ ಟೀಂ ಇಂಡಿಯಾಕ್ಕೆ ಯಾವುದೇ ನಷ್ಟವಾಗದು.

ಕಳೆದ ಮೂರೂ ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾ ಸೂಪರ್ 8 ರ ಘಟ್ಟಕ್ಕೆ ಈಗಾಗಲೇ ಅರ್ಹತೆ ಪಡೆದಿದೆ. ಎ ಗುಂಪಿನ ಅಗ್ರಸ್ಥಾನಿಯಾಗಿರುವ ಭಾರತಕ್ಕೆ ಈ ಪಂದ್ಯ ಔಪಚಾರಿಕವಾಗಿದೆಯಷ್ಟೇ. ಆದರೆ ಕಳೆದ ಮೂರೂ ಪಂದ್ಯಗಳನ್ನು ನ್ಯೂಯಾರ್ಕ್ ನಲ್ಲಿ ಯಾವುದೇ ಆಟಗಾರರ ಬದಲಾವಣೆ ಮಾಡದೇ ಆಡಿದ್ದ ಭಾರತ ಈ ಪಂದ್ಯದಲ್ಲಿ ಇತರೆ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆಯಿತ್ತು.

ಇಂದಿನ ಪಂದ್ಯದಲ್ಲಿ ರವೀಂದ್ರ ಜಡೇಜಾಗೆ ವಿಶ್ರಾಂತಿ ನೀಡಿ ಕುಲದೀಪ್ ಯಾದವ್, ಅಕ್ಸರ್ ಪಟೇಲ್ ಗೆ ವಿಶ್ರಾಂತಿ ನೀಡಿ ಯಜುವೇಂದ್ರ ಚಾಹಲ್ ಗೆ ಅವಕಾಶ ನೀಡುವ ಸಾಧ್ಯತೆಯಿತ್ತು. ಅಲ್ಲದೆ ಬ್ಯಾಟಿಂಗ್ ನಲ್ಲೂ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಒಂದು ವೇಳೆ ಮಳೆಯಿಲ್ಲದೇ ಹೋದರೆ ಈ ಆಟಗಾರರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ.

ಅತ್ತ ಕೆನಡಾಗೂ ಈ ಪಂದ್ಯದ ಫಲಿತಾಂಶದಿಂದ ಏನೂ ಬದಲಾವಣೆಯಾಗದು. ಆಡಿದ 3 ಪಂದ್ಯಗಳಲ್ಲಿ ಕೇವಲ 1 ಗೆಲುವು ಕಂಡಿರುವ ಕೆನಡಾ ಸೂಪರ್ 8 ರ ಘಟ್ಟಕ್ಕೆ ಅರ್ಹತೆ ಪಡೆದಿಲ್ಲ. ಹಾಗಿದ್ದರೂ ಭಾರತದಂತಹ ಅನುಭವಿ ಆಟಗಾರರ ಮುಂದೆ ಸಾಮರ್ಥ್ಯ ಪ್ರದರ್ಶಿಸಲು ವೇದಿಕೆ ಸಿಕ್ಕಂತಾಗಲಿದೆ. ಯಾವುದಕ್ಕೂ ಮಳೆ ಕೃಪೆ ತೋರಬೇಕು. ಈ ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ