ಟ್ರಿನಿಡಾಡ್: ಪ್ರತೀ ಬಾರಿ ಐಸಿಸಿ ಟೂರ್ನಿಗಳಲ್ಲಿ ಸೆಮಿಫೈನಲ್ ಹಂತಕ್ಕೇ ಸೋತು ನಿರ್ಗಮಿಸುವ ದ ಆಫ್ರಿಕಾ ಚೋಕರ್ಸ್ ಎಂಬ ಹಣೆಪಟ್ಟಿಯನ್ನು ಖಾಯಂ ಮಾಡಿಕೊಂಡಿತ್ತು. ಆದರೆ ಈ ಬಾರಿ ಆ ಹಣೆಪಟ್ಟಿ ಕಿತ್ತು ಹಾಕಲು ಆಫ್ರಿಕಾಗೆ ಸುವರ್ಣಾವಕಾಶವೊಂದು ಬಂದಿದೆ.
ಟಿ20 ವಿಶ್ವಕಪ್ 2024 ರ ಮೊದಲ ಸೆಮಿಫೈನಲ್ ನಲ್ಲಿ ನಾಳೆ ಅಫ್ಘಾನಿಸ್ತಾನ ಮತ್ತು ದ ಆಫ್ರಿಕಾ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್ ಪ್ರವೇಶಿಸಲಿದೆ. ಇದುವರೆಗೆ ಸೂಪರ್ 8 ಹಂತದಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದು ಉತ್ಸಾಹದಲ್ಲಿರುವ ಆಫ್ರಿಕಾಗೆ ಈಗ ಅಫ್ಘಾನಿಸ್ತಾನದಂತಹ ಎದುರಾಳಿ ಸಿಕ್ಕಿರುವುದು ಅದೃಷ್ಟವೇ ಸರಿ.
ಇಂಗ್ಲೆಂಡ್ ನಂತಹ ಪ್ರಬಲ ತಂಡವನ್ನೂ ಮಣಿಸಿ ಸೆಮಿಫೈನಲ್ ಗೇರಿರುವ ಆಫ್ರಿಕಾಗೆ ಈಗ ಅಫ್ಘಾನಿಸ್ತಾನವನ್ನು ಸೋಲಿಸುವ ತಾಕತ್ತಿದೆ. ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡಿ ಗೆದ್ದರೆ ಟಿ20 ವಿಶ್ವಕಪ್ ನಲ್ಲಿ ಫೈನಲ್ ಗೇರಿದ ಸಾಧನೆ ಮಾಡಬಹುದಾಗಿದೆ. ಜೊತೆಗೆ ಇದುವರೆಗೆ ತಮಗೆ ಕನಸಾಗಿಯೇ ಇದ್ದ ಐಸಿಸಿ ಪ್ರಶಸ್ತಿ ಪಡೆಯುವ ಕನಸು ಕಾಣಬಹುದಾಗಿದೆ.
ಇನ್ನೊಂದೆಡೆ ಅಫ್ಘಾನಿಸ್ತಾನ ಕೂಡಾ ದುರ್ಬಲ ಎದುರಾಳಿಯೇನಲ್ಲ. ಈ ಬಾರಿಯ ಕಿರು ವಿಶ್ವಕಪ್ ನಲ್ಲಿ ದೈತ್ಯ ಸಂಹಾರಿ ಎಂದಿದ್ದರೆ ಅದು ಅಫ್ಘಾನಿಸ್ತಾನ ತಂಡವೆನ್ನಬಹುದು. ಪ್ರಬಲ ಆಸ್ಟ್ರೇಲಿಯಾಕ್ಕೇ ತನ್ನ ಸ್ಪಿನ್ ಅಸ್ತ್ರದ ಮೂಲಕ ಸೋಲಿನ ರುಚಿ ತೋರಿಸಿದ ಖ್ಯಾತಿ ಅಫ್ಘಾನಿಸ್ತಾನದ್ದು. ಕನಿಷ್ಠ ಮೊತ್ತವಾಗಿದ್ದರೂ ಸ್ಪಿನ್ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಟ್ಟಿ ಹಾಕಿದೆ. ರಶೀದ್ ಖಾನ್, ನವೀನ್ ಉಲ್ ಹಕ್ ತಂಡದ ಪ್ರಬಲ ಶಕ್ತಿಗಳು. ಇದೇ ಮೊದಲ ಬಾರಿಗೆ ಐಸಿಸಿ ಪ್ರಶಸ್ತಿ ಟೂರ್ನಿಯ ಫೈನಲ್ ಹಂತಕ್ಕೇರಿದ ಸಾಧನೆ ಮಾಡಬಹುದಾದ ಸುವರ್ಣಾವಕಾಶ ಅಫ್ಘನ್ನರ ಮುಂದಿದೆ. ಹೀಗಾಗಿ ಮೊದಲ ಸೆಮಿಫೈನಲ್ ನಲ್ಲಿ ಪೈಪೋಟಿ ನಿರೀಕ್ಷಿಸಬಹುದು. ಈ ಪಂದ್ಯ ನಾಳೆ ಬೆಳಿಗ್ಗೆ 6 ಗಂಟೆಗೆ ಆರಂಭವಾಗಲಿದೆ.