ಗಯಾನ: ಟಿ20 ವಿಶ್ವಕಪ್ ನಲ್ಲಿ ಸೆಮಿಫೈನಲ್ ಗೇರಿರುವ ಟೀಂ ಇಂಡಿಯಾ ಇಂದು ಇಂಗ್ಲೆಂಡ್ ವಿರುದ್ಧ ಸೆಣಸಾಡಲಿದೆ. ಆದರೆ ಈ ಪಂದ್ಯದಲ್ಲಿ ಕಳೆದ ವಿಶ್ವಕಪ್ ಸೆಮಿಫೈನಲ್ ನಲ್ಲಾದ ಗತಿ ಬಾರದಿದ್ದರೆ ಸಾಕು ಎಂದು ಅಭಿಮಾನಿಗಳು ಪ್ರಾರ್ಥಿಸುವಂತಾಗಿದೆ.
2022 ರ ಟಿ20 ವಿಶ್ವಕಪ್ ನಲ್ಲಿ ಓವಲ್ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಸೆಮಿಫೈನಲ್ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಭಾರತ 10 ವಿಕೆಟ್ ಗಳಿಂದ ಹೀನಾಯವಾಗಿ ಸೋತಿತ್ತು. ಇದೀಗ ಮತ್ತೆ ಭಾರತ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಮುಖಾಮುಖಿಯಾಗುತ್ತಿದೆ. ಈ ಬಾರಿ ಕಳೆದ ಬಾರಿಯ ಸೋಲಿಗೆ ಸೇಡು ತೀರಿಸಿಕೊಳ್ಳುವಂತಾಗಲಿ ಎನ್ನುವುದೇ ಅಭಿಮಾನಿಗಳ ಪ್ರಾರ್ಥನೆ.
ಸೂಪರ್ 8 ಹಂತದವರೆಗಿನ ಪಂದ್ಯಗಳಲ್ಲಿ ಭಾರತಕ್ಕೆ ತಲೆನೋವಾಗಿದ್ದು ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಫಾರ್ಮ್. ಹಾಗಿದ್ದರೂ ಇವರನ್ನು ಬದಲಾಯಿಸುವ ಸಾಧ್ಯತೆಯಿಲ್ಲ. ವಿರಾಟ್ ಕೊಹ್ಲಿ ಬ್ಯಾಟಿಂಗ್ ಕ್ರಮಾಂಕವನ್ನು ಯಾವುದೇ ಕಾರಣಕ್ಕೂ ಬದಲಾಯಿಸಲ್ಲ ಎಂದು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಈಗಾಗಲೇ ಹೇಳಿದ್ದಾರೆ. ಜಡೇಜಾ ಕೂಡಾ ಇದುವರೆಗೆ ವಿಕೆಟ್ ಕೀಳಲು ವಿಫಲರಾಗಿದ್ದಾರೆ. ಆದರೆ ಹಿರಿಯ ಆಟಗಾರ ಜೊತೆಗೆ ಫೀಲ್ಡಿಂಗ್ ನಲ್ಲಿ ಉಪಯುಕ್ತ ಆಟಗಾರ ಎಂಬ ಕಾರಣಕ್ಕೆ ಅವರನ್ನು ತಂಡದಲ್ಲಿರಿಸಿಕೊಳ್ಳಬಹುದು. ಅದೂ ಈ ನಿರ್ಣಾಯಕ ಹಂತದಲ್ಲಿ ತಂಡದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ.
ಇತ್ತ ಇಂಗ್ಲೆಂಡ್ ಸೂಪರ್ 8 ಹಂತದಲ್ಲಿ ಒಂದು ಪಂದ್ಯದಲ್ಲಿ ಸೋತಿದ್ದು ಬಿಟ್ಟರೆ ಉಳಿದೆಲ್ಲಾ ಪಂದ್ಯಗಳಲ್ಲಿ ಅಧಿಕಾರಯುತ ಆಟವಾಡಿತ್ತು ಫಿಲಿಪ್ ಸಾಲ್ಟ್, ಜೋಸ್ ಬಟ್ಲರ್, ವಿಲ್ ಜ್ಯಾಕ್ಸ್, ಜಾನಿ ಬೇರ್ ಸ್ಟೋ, ಹ್ಯಾರಿ ಬ್ರೂಕ್ ಮೊದಲಾದ ಟಿ20 ಕ್ರಿಕೆಟ್ ಗೆ ಹೇಳಿ ಮಾಡಿಸಿದ ಆಟಗಾರರು ಇಂಗ್ಲೆಂಡ್ ತಂಡದಲ್ಲಿದ್ದಾರೆ. ಹೀಗಾಗಿ ಇಂಗ್ಲೆಂಡ್ ಎದುರಿಸಲು ಭಾರತ ತನ್ನೆಲ್ಲಾ ಸಾಮರ್ಥ್ಯ ಧಾರೆಯೆರೆದು ಆಡಬೇಕು. ಅದರಲ್ಲೂ ನಿರ್ಣಾಯಕ ಹಂದಲ್ಲಿ ಮುಗ್ಗರಿಸುವ ಚಾಳಿಯನ್ನು ಇನ್ನಾದರೂ ಬಿಡಬೇಕು. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.