ಟಿ20 ವಿಶ್ವಕಪ್ 2024: ಟೀಂ ಇಂಡಿಯಾಕ್ಕಿಂದು ಭಾರತೀಯರೇ ಇರುವ ಅಮೆರಿಕಾ ಎದುರಾಳಿ

Krishnaveni K

ಬುಧವಾರ, 12 ಜೂನ್ 2024 (10:33 IST)
ನ್ಯೂಯಾರ್ಕ್: ಟಿ20 ವಿಶ್ವಕಪ್ ನಲ್ಲಿ ಇಂದು ಭಾರತ ಮತ್ತು ಭಾರತದ ನಡುವಿನ ಕದನ ಎನ್ನಬಹುದು. ಯಾಕೆಂದರೆ ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ಎದುರಾಳಿ ಅಮೆರಿಕಾವೇ ಆದರೂ ಅದರಲ್ಲಿ ಬಹುತೇಕರು ಭಾರತೀಯರೇ ಇದ್ದಾರೆ ಎನ್ನುವುದು ವಿಶೇಷ.

ಟೀಂ ಇಂಡಿಯಾ ಇದುವರೆಗೆ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ತನ್ನ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿದೆ. ಮೊದಲ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಸುಲಭ ಜಯ ಸಾಧಿಸಿದ್ದ ಟೀಂ ಇಂಡಿಯಾ ಕಳೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ರೋಚಕ ಜಯ ಸಾಧಿಸಿತ್ತು.

ಆದರೆ ಭಾರತ ತಂಡದಲ್ಲಿ ಈ ಪಂದ್ಯಕ್ಕೆ ಕೆಲವೊಂದು ಬದಲಾವಣೆಗಳಾಗಬೇಕು ಎಂಬ ಕೂಗು ಕೇಳಿಬರುತ್ತಿದೆ. ವಿರಾಟ್ ಕೊಹ್ಲಿ ಕಳೆದ ಎರಡು ಪಂದ್ಯಗಳಲ್ಲಿ ರೋಹಿತ್ ಜೊತೆಗೆ ಆರಂಭ ಮಾಡಿದರೂ ಫಲ ಕೊಟ್ಟಿಲ್ಲ. ಇನ್ನು, ಸೂರ್ಯಕುಮಾರ್ ಯಾದವ್, ಶಿವಂ ದುಬೆಯಿಂದ ಹೆಚ್ಚಿನ ಕೊಡುಗೆ ಬಂದಿಲ್ಲ. ಹೀಗಾಗಿ ಕೊಹ್ಲಿ ಆರಂಭಿಕ ಸ್ಥಾನ ಬಿಟ್ಟು ಮೂರನೇ ಕ್ರಮಾಂಕದಲ್ಲಿ ಆಡಬೇಕು. ಸೂರ್ಯಕುಮಾರ್, ಶಿವಂ ದುಬೆ ಬದಲಿಗೆ ಯಶಸ್ವಿ ಜೈಸ್ವಾಲ್ ಮತ್ತು ಸಂಜು ಸ್ಯಾಮ್ಸನ್ ಗೆ ಅವಕಾಶ ನೀಡಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ. ಆದರೆ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಸಾಧ್ಯತೆಯಿಲ್ಲ.

ಇತ್ತ ಅಮೆರಿಕಾ ತಂಡದಲ್ಲಿ ನಾಯಕರಿಂದ ಹಿಡಿದು ಪ್ರಮುಖ ಆಟಗಾರರೆಲ್ಲರೂ ಭಾರತೀಯ ಮೂಲದವರೇ. ಹೀಗಾಗಿ ಇದು ಭಾರತ ವರ್ಸಸ್ ಭಾರತ ಪಂದ್ಯ ಎನ್ನಬಹುದು. ಅಮೆರಿಕಾವೂ ಕೂಡಾ ಆಡಿದ ಎರಡೂ ಪಂದ್ಯಗಳನ್ನು ಗೆದ್ದಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೂಪರ್ ಓವರ್ ನಲ್ಲಿ ಸಿಕ್ಕ ಗೆಲುವು ತಂಡದ ಆತ್ಮವಿಶ್ವಾಸ ಹೆಚ್ಚಿಸಿರುತ್ತದೆ. ಇಂದು ರಾತ್ರಿ 8 ಗಂಟೆಗೆ ಈ ಪಂದ್ಯ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ