ಬಾರ್ಬಡೋಸ್: ಇಂದು ನಡೆಯಲಿರುವ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲದೇ ಇದ್ದರೆ ರೋಹಿತ್ ಶರ್ಮಾ ಬಾರ್ಬಡೋಸ್ ಸಮುದ್ರಕ್ಕೆ ಹಾರಬಹುದು ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.
ಇದು ರೋಹಿತ್ ಶರ್ಮಾಗೆ ಸತತ ಎರಡನೇ ಐಸಿಸಿ ವಿಶ್ವಕಪ್ ಟ್ರೋಫಿ ಫೈನಲ್ ಪಂದ್ಯವಾಗಿದೆ. ಎರಡನೇ ಬಾರಿಯೂ ವಿಶ್ವಕಪ್ ಫೈನಲ್ ಸೋತರೆ ಬೇಸರದಲ್ಲಿ ರೋಹಿತ್ ಶರ್ಮಾ ಬಾರ್ಬಡೋಸ್ ಸಮುದ್ರಕ್ಕೆ ಹಾರಬಹುದು ಎಂದು ಗಂಗೂಲಿ ತಮಾಷೆಯಾಗಿ ಹೇಳಿದ್ದಾರೆ.
ಈ ಮೂಲಕ ಭಾರತ ಇಂದು ಗೆದ್ದೇ ಗೆಲ್ಲುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಕಳೆದ 11 ವರ್ಷಗಳಿಂದ ಭಾರತ ಐಸಿಸಿ ಟ್ರೋಫಿ ಗೆದ್ದಿಲ್ಲ. ಆ ಬರ ಇಂದು ನೀಗಲಿದೆ ಎಂಬುದು ಕೋಟ್ಯಾಂತರ ಅಭಿಮಾನಿಗಳ ನಿರೀಕ್ಷೆಯಾಗಿದೆ. ಇದೇ ಭರವಸೆಯನ್ನು ಗಂಗೂಲಿಯೂ ವ್ಯಕ್ತಪಡಿಸಿದ್ದಾರೆ.
ಆರು ತಿಂಗಳ ಅವಧಿಯಲ್ಲಿ ಮತ್ತೊಂದು ವಿಶ್ವಕಪ್ ಫೈನಲ್ ನಲ್ಲಿ ರೋಹಿತ್ ಸೋಲು ಕಾಣಬಹುದು ಎಂದು ನನಗನಿಸುತ್ತಿಲ್ಲ. ತನ್ನ ನಾಯಕತ್ವದಲ್ಲಿ ಆರೇಳು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ವಿಶ್ವಕಪ್ ಫೈನಲ್ ಸೋತರೆ ರೋಹಿತ್ ಬಾರ್ಬಡೋಸ್ ಸಮುದ್ರಕ್ಕೆ ಹಾರಬಹುದು ಎಂದು ಗಂಗೂಲಿ ತಮಾಷೆ ಮಾಡಿದ್ದಾರೆ.
ರೋಹಿತ್ ನಾಯಕರಾಗಿ ತಾವೇ ಮುಂದೆ ನಿಂತು ತಂಡ ಮುನ್ನಡೆಸಿದ್ದಾರೆ. ತಾವೇ ಆಟವಾಡಿ ಇತರರಿಗೆ ಸ್ಪೂರ್ತಿಯಾಗಿದ್ದಾರೆ. ಭಾರತ ಇಂದು ಗೆಲ್ಲುತ್ತದೆ ಎಂಬ ವಿಶ್ವಾಸವಿದೆ. ಅದಕ್ಕಾಗಿ ಅವರು ಒತ್ತಡವಿಲ್ಲದೇ ಆಡಬೇಕು. ಭಾರತ ಗೆಲ್ಲಲಿ ಎಂದು ನಾನು ಹಾರೈಸುತ್ತೇನೆ. ದೊಡ್ಡ ಟೂರ್ನಮೆಂಟ್ ಗೆಲ್ಲಲು ಅದೃಷ್ಟವೂ ಇರಬೇಕು. ರೋಹಿತ್ ಗೆ ಅದೃಷ್ಟವೂ ಸಾಥ್ ನೀಡಲಿ ಎಂದು ಹಾರೈಸುತ್ತೇನೆ ಎಂದು ಗಂಗೂಲಿ ಹೇಳಿದ್ದಾರೆ.