ಮುಂಬೈ: ಮುಂಬರುವ ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾ ಘೋಷಣೆ ಯಾವಾಗ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ಐಪಿಎಲ್ ಮುಗಿದ ಬೆನ್ನಲ್ಲೇ ಟಿ20 ವಿಶ್ವಕಪ್ ಆರಂಭವಾಗಲಿದೆ.
ಈ ಬಾರಿ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಜೂನ್ ನಲ್ಲಿ ಟೂರ್ನಮೆಂಟ್ ಆರಂಭವಾಗಲಿದೆ. ಐಪಿಎಲ್ ಮುಗಿದ ತಕ್ಷಣ ಭಾರತೀಯ ಆಟಗಾರರು ವೆಸ್ಟ್ ಇಂಡೀಸ್ ಗೆ ಪ್ರಯಾಣ ಬೆಳೆಸಲಿದ್ದಾರೆ.
ಈಗಾಗಲೇ ಟಿ20 ವಿಶ್ವಕಪ್ ಗೆ ಯಾರೆಲ್ಲಾ ಆಯ್ಕೆಯಾಗಬಹುದು ಎಂಬ ಬಗ್ಗೆ ಭಾರೀ ಚರ್ಚೆ ನಡೆದಿದೆ. ರೋಹಿತ್ ಶರ್ಮಾ ನೇತೃತ್ವದಲ್ಲಿ ಮತ್ತೊಮ್ಮೆ ಟೀಂ ಇಂಡಿಯಾ ವಿಶ್ವಕಪ್ ಪಂದ್ಯವಾಡಲಿದೆ. ವಿರಾಟ್ ಕೊಹ್ಲಿ ಕೂಡಾ ತಂಡದ ಭಾಗವಾಗಲಿದ್ದಾರೆ. ಆದರೆ ಹಾರ್ದಿಕ್ ಪಾಂಡ್ಯ ತಂಡಕ್ಕೆ ಸೇರುವುದು ಅನುಮಾನವಾಗಿದೆ. ಅವರ ಬದಲು ಕೆಲವು ಯುವ ಆಟಗಾರರ ಹೆಸರು ಕೇಳಿಬರುತ್ತಿದೆ.
ಆದರೆ ಅಂತಿಮವಾಗಿ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಜೊತೆ ಚರ್ಚಿಸಿ ತಂಡದ ಆಯ್ಕೆ ಮಾಡಲಿದೆ. ಏಪ್ರಿಲ್ 27 ರಂದು ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಐಪಿಎಲ್ ಪಂದ್ಯ ನಡೆಯಲಿದ್ದು, ಇದೇ ಸಂದರ್ಭದಲ್ಲಿ ರೋಹಿತ್ ಮತ್ತು ಅಜಿತ್ ಅಗರ್ಕರ್ ಜೊತೆಗೂಡಿ ಟೀಂ ಇಂಡಿಯಾ ಘೋಷಣೆ ಮಾಡಲಿದ್ದಾರೆ.