ಭಾರತ-ಬಾಂಗ್ಲಾ ಟೆಸ್ಟ್: ಶ್ರೇಯಸ್, ಪೂಜಾರ ಅರ್ಧಶತಕ, ರಿಷಬ್ ಪಂತ್ ದಾಖಲೆ
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಆರಂಭ ಉತ್ತಮವಾಗಿತ್ತು. ಆದರೆ 41 ರನ್ ಆಗುವಷ್ಟರಲ್ಲಿ ಶುಬ್ನಂ ಗಿಲ್ 20 ರನ್ ಗೆ ವಿಕೆಟ್ ಒಪ್ಪಿಸಿದರು. ಅವರ ಹಿಂದೆಯೇ 22 ರನ್ ಗಳಿಸಿ ಕೆಎಲ್ ರಾಹುಲ್ ಮತ್ತು 1 ರನ್ ಗೆ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡಾಗ ಭಾರತ ಕೊಂಚ ಸಂಕಷ್ಟಕ್ಕೀಡಾಯಿತು.
ಈ ವೇಳೆ ಚೇತೇಶ್ವರ ಪೂಜಾರಗೆ ಜೊತೆಯಾದ ರಿಷಬ್ ಪಂತ್ ಕೆಲವು ಮನಮೋಹಕ ಹೊಡೆತಗಳ ಮೂಲಕ ತಂಡದ ಮೊತ್ತ ಸುಧಾರಿಸಿದರು. ರಿಷಬ್ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 4000 ರನ್ ಮತ್ತು ಸಿಕ್ಸರ್ ಗಳ ಅರ್ಧಶತಕ ಗಳಿಸಿದ ದಾಖಲೆ ಮಾಡಿದರು. ದುರದೃಷ್ಟವಶಾತ್ 46 ರನ್ ಗಳಿಸಿ ಅವರು ಔಟಾದರು. ಬಳಿಕ ಚೇತೇಶ್ವರ ಪೂಜಾರ-ಶ್ರೇಯಸ್ ಅಯ್ಯರ್ ಜೋಡಿ ಆಸರೆಯಾಯಿತು. ಶತಕದ ಜೊತೆಯಾಟವಾಡಿದ ಈ ಜೋಡಿ ಭಾರತವನ್ನು ಸುರಕ್ಷಿತ ಸ್ಥಾನಕ್ಕೆ ಕೊಂಡೊಯ್ದರು. ಪೂಜಾರ 90 ರನ್ ಗೆ ಔಟಾದರು.
ಇದೀಗ 82 ರನ್ ಗಳಿಸಿರುವ ಶ್ರೇಯಸ್ ಅಯ್ಯರ್, ಕ್ರೀಸ್ ನಲ್ಲಿದ್ದಾರೆ. ಬಾಂಗ್ಲಾ ಪರ ತೈಜುಲ್ ಇಸ್ಲಾಮ್ 3, ಮೆಹದಿ ಮಿರಾಜ್ ಹಸನ್ 2, ಖಲೀದ್ ಅಹಮ್ಮದ್ 1 ವಿಕೆಟ್ ಕಬಳಿಸಿದರು.