ಬೃಹತ್ ಮೊತ್ತ ಪೇರಿಸಿದ ಟೀಂ ಇಂಡಿಯಾ: ರಿಷಬ್ ಪಂತ್ ಗಾಗಿ ಹೊಸ ಹಾಡು ಬರೆದ ಅಭಿಮಾನಿಗಳು!
ಶುಕ್ರವಾರ, 4 ಜನವರಿ 2019 (12:44 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 7 ವಿಕೆಟ್ ನಷ್ಟಕ್ಕೆ 622 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿದೆ.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿರುವ ಆಸ್ಟ್ರೇಲಿಯಾ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 24 ರನ್ ಗಳಿಸಿದೆ. ಆಸೀಸ್ ಪರ ಉಸ್ಮಾನ್ ಖವಾಜ 5 ಮತ್ತು ಮಾರ್ಕಸ್ ಹ್ಯಾರಿಸ್ 19 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.
ಇದಕ್ಕೂ ಮೊದಲು ಮೊದಲ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಭರ್ಜರಿ ಶತಕ ಗಳಿಸಿದ್ದು, 159 ರನ್ ಗಳಿಸಿ ಅಜೇಯರಾಗುಳಿದರು. ರವೀಂದ್ರ ಜಡೇಜಾ 81 ರನ್ ಗೆ ಔಟಾದಾಗ ಭಾರತ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ಇನ್ನು, ರಿಷಬ್ ಪಂತ್ ಭರ್ಜರಿ ಇನಿಂಗ್ಸ್ ನೋಡಿ ಭಾರತ ತಂಡದ ಅಧಿಕೃತ ಅಭಿಮಾನಿಗಳ ಸಂಘ ಭಾರತ್ ಆರ್ಮಿ ಹೊಸ ಹಾಡೊಂದನ್ನು ಬರೆದಿದೆ. ಈ ಸರಣಿಯಲ್ಲಿ ರಿಷಬ್ ಪಂತ್ ರನ್ನು ಬೇಬಿ ಸಿಟ್ಟಿಂಗ್ ಮಾಡಲು ಲಾಯಕ್ಕು ಎಂದು ಆಸೀಸ್ ನಾಯಕ ಟಿಮ್ ಪೇಯ್ನ್ ಸ್ಲೆಡ್ಜಿಂಗ್ ಮಾಡಿದ್ದರು.
ಅದಕ್ಕೀಗ ಭಾರತೀಯ ಅಭಿಮಾನಿಗಳು ಹಾಡಿನ ಮೂಲಕ ತಿರುಗೇಟು ಕೊಟ್ಟಿದ್ದಾರೆ. ರಿಷಬ್ ನಿಮ್ಮ ಮಕ್ಕಳನ್ನೂ ನೋಡಿಕೊಳ್ಳುತ್ತಾರೆ, ಸಿಕ್ಸರ್ ಕೂಡಾ ಸಿಡಿಸುತ್ತಾರೆ ಎಂಬರ್ಥದ ಹಾಡಿನ ಸಾಲನ್ನು ಅಭಿಮಾನಿಗಳು ಮೈದಾನದಲ್ಲಿ ಹಾಡಿ ರಿಷಬ್ ಪರ ಜೈಕಾರ ಹಾಕಿದ್ದು ಇಂದಿನ ದಿನದ ವಿಶೇಷವಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ