ನವದೆಹಲಿ: ರಾಜ್ಯಸಭೆಯಲ್ಲಿ ಇಂದು ಪ್ರಧಾನಿ ಮೋದಿ ಭಾಷಣ ಮಾಡಿದ್ದು, ಈ ವೇಳೆ ವಿಪಕ್ಷ ಸಂಸದರು ಪ್ರತಿಭಟಿಸಿ ಸಭಾತ್ಯಾಗ ಮಾಡಿದ್ದಾರೆ. ಇದನ್ನು ಮೋದಿ ಖಂಡಿಸಿದ್ದು, ಇದು ರಾಜ್ಯಸಭೆಗೆ ಮಾಡಿದ ಅವಮಾನ ಎಂದಿದ್ದಾರೆ.
ನಿನ್ನೆ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸಿದ ಪ್ರಧಾನಿ ಮೋದಿ ಇಂದು ರಾಜ್ಯಸಭೆಯಲ್ಲಿ ಮಾತನಾಡಿದರು. ರಾಜ್ಯಸಭೆಯಲ್ಲೂ ಅವರ ಭಾಷಣಕ್ಕೆ ವಿಪಕ್ಷಗಳಿಂದ ವಿರೋಧ ವ್ಯಕ್ತವಾಯಿತು. ಮೋದಿ ಭಾಷಣ ಮಾಡುತ್ತಿದ್ದಂತೇ ಘೋಷಣೆ ಕೂಗುತ್ತಾ ವಿಪಕ್ಷ ಸದಸ್ಯರು ಎದ್ದು ಹೋದರು.
ಇದಕ್ಕೆ ತಿರುಗೇಟು ನೀಡಿದ ಪ್ರಧಾನಿ ಮೋದಿ ಸುಳ್ಳು ಹರಡುತ್ತಿರುವವರನ್ನು ದೇಶ ಗಮನಿಸುತ್ತಿದೆ. ಸತ್ಯ ಕೇಳಲು ದೈರ್ಯ ಬೇಕು. ಇದೇ ಸಭೆಯಲ್ಲಿ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೇಳಲು ಅವರಿಗೆ ಧೈರ್ಯವೇ ಇಲ್ಲ. ಅವರು ಈ ರಾಜ್ಯಸಭೆಗೇ ಅವಮಾನ ಮಾಡುತ್ತಿದ್ದಾರೆ. ರಾಜ್ಯಸಭೆಯ ಗತವೈಭವಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಮ್ಮ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಮಾತನಾಡಲು ಅವಕಾಶ ಕೊಡಲಿಲ್ಲ ಎಂದು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದವರು. ಮೋದಿ ಭಾಷಣಕ್ಕೆ ಅಡ್ಡಿಪಡಿಸಿದ ವಿಪಕ್ಷ ಸದಸ್ಯರ ವರ್ತನೆಗೆ ಸ್ಪೀಕರ್ ಜಗದೀಪ್ ಧನ್ಕರ್ ಆಕ್ಷೇಪ ವ್ಯಕ್ತಪಡಿಸಿದರು. ಪ್ರಧಾನಿ ಮಾತನ್ನು ಕೇಳುವ ವ್ಯವಧಾನವೂ ಇಲ್ಲದೇ ರಾಜ್ಯಸಭೆಯ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆಕ್ಷೇಪ ಹೊರಹಾಕಿದರು.
ಸಂವಿಧಾನ ಲೈಟ್ ಹೌಸ್ ನಂತೆ: ಮೋದಿ
ಇನ್ನು, ತಮ್ಮ ಭಾಷಣದಲ್ಲಿ ಸಂವಿಧಾನಕ್ಕೆ ಬೆಲೆ ಕೊಡುತ್ತಿಲ್ಲ ಎಂಬ ವಿಪಕ್ಷ ನಾಯಕರ ಆರೋಪಕ್ಕೆ ಮೋದಿ ತಿರುಗೇಟು ನೀಡಿದರು. ಸಂವಿಧಾನ ನಮಗೆ ಲೈಟ್ ಹೌಸ್ ಇದ್ದಂತೆ. ಸಂವಿಧಾನ ಇರುವುದಕ್ಕೇ ನಾನು ಇಂದು ಇಲ್ಲಿದ್ದೇನೆ. ಸಂವಿಧಾನವು ದೀಪಸ್ತಂಬದಂತೆ ನಮಗೆ ಮಾರ್ಗದರ್ಶನ ಮಾಡುತ್ತಿದೆ. ಈಗ ಇಲ್ಲಿ ಸಂವಿಧಾನವನ್ನು ತೋರಿಸುತ್ತಿರುವವರು ಹಿಂದೆ ಅದನ್ನು ವಿರೋಧಿಸಿದವರು ಎಂದು ವಾಗ್ದಾಳಿ ನಡೆಸಿದರು.