ಗಾಲೆ: ಭಾರತ ವಿರುದ್ಧ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಅತಿಥೇಯ ಶ್ರೀಲಂಕಾ ಫಾಲೋ ಆನ್ ಅವಮಾನಕ್ಕೆ ಗುರಿಯಾಗುವುದು ಸ್ವಲ್ಪದರಲ್ಲೇ ತಪ್ಪಿದೆ. ಭಾರತ ನೀಡಿದ್ದ 600 ರನ್ ಗಳ ಬೃಹತ್ ಮೊತ್ತ ಸರಿಗಟ್ಟಲಾಗದ ಲಂಕಾ 291 ರನ್ ಗಳಿಗೆ ಆಲೌಟ್ ಆಗುವ ಮೂಲಕ 309 ರನ್ ಗಳ ಹಿನ್ನಡೆ ಅನುಭವಿಸಿತು.
ಇದರಿಂದಾಗಿ ಫಾಲೋ ಆನ್ ಭೀತಿಗೆ ಸಿಲುಕಿತು. ಆದರೆ ಎದುರಾಳಿಗೆ ಭಾರತ ಆ ಕಷ್ಟ ಕೊಡಲಿಲ್ಲ. ಶ್ರೀಲಂಕಾ ಪರ ಆಂಜಲೋ ಮ್ಯಾಥ್ಯೂಸ್ ಮತ್ತು ದಿಲ್ ರುವಾನ್ ಪರೇರಾ ಅರ್ಧಶತಕ ಗಳಿಸಿದರು. ಮ್ಯಾಥ್ಯೂಸ್ ವಿಕೆಟ್ ಜಡೇಜಾ ಪಾಲಾಗುತ್ತಿದ್ದಂತೆ ಲಂಕಾ ಹಳಿ ತಪ್ಪಿದಂತಾಯಿತು. ಆದರೆ ಈ ಸಂದರ್ಭದಲ್ಲಿ ಲಂಕಾ ಆಧರಿಸಿದ ಪೆರೇರಾ 92 ರನ್ ಗಳಿಸಿ ಅಜೇಯರಾಗುಳಿದರು.
ರವೀಂದ್ರ ಜಡೇಜಾ ಮೂರು ವಿಕೆಟ್ ಕಿತ್ತರೆ, ಮೊಹಮ್ಮದ್ ಶಮಿ 2, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್ ಮತ್ತು ಉಮೇಶ್ ಯಾದವ್ ತಲಾ ಒಂದು ವಿಕೆಟ್ ಪಡೆದು ಲಂಕಾ ದಿಂಡಿರುಳಿಸಿದರು. ಮೊದಲ ಇನಿಂಗ್ಸ್ ಮುನ್ನಡೆಗೆ ಇನ್ನೊಂದಷ್ಟು ರನ್ ಪೇರಿಸಿ ಲಂಕಾಗೆ ಟೀಂ ಇಂಡಿಯಾ ಬ್ಯಾಟಿಂಗ್ ಬಿಟ್ಟುಕೊಡಬಹುದು. ಪಂದ್ಯ ಮುಗಿಯಲು ಇನ್ನೂ ಎರಡು ದಿನ ಬಾಕಿಯಿರುವ ಕಾರಣ ಫಲಿತಾಂಶ ನಿಶ್ಚಿತ.