ಮೊಹಾಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 358 ರನ್ ಗಳಿಸಿಯೂ ಎದುರಾಳಿಗಳನ್ನು ನಿಯಂತ್ರಿಸಲಾಗದೇ 4 ವಿಕೆಟ್ ಗಳ ಸೋಲೊಪ್ಪಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 358 ರನ್ ಗಳಿಸಿದೆ.. ಇಷ್ಟು ದೊಡ್ಡ ಮೊತ್ತ ಗಳಿಸಿದ ಮೇಲೆ ಟೀಂ ಇಂಡಿಯಾ ಸುಲಭವಾಗಿ ಗೆಲ್ಲಬಹುದು ಎಂದೇ ಎಲ್ಲರ ಲೆಕ್ಕಾಚಾರವಾಗಿತ್ತು. ಅದಕ್ಕೆ ತಕ್ಕಂತೇ ಆಸೀಸ್ ನಾಯಕ ಏರಾನ್ ಫಿಂಚ್ ಶೂನ್ಯಕ್ಕೆ ನಿರ್ಗಮಿಸಿದಾಗ ಇಂದು ಭಾರತದ್ದೇ ಮೆರೆದಾಟ ಎಂದು ಎಲ್ಲರೂ ಲೆಕ್ಕಾಚಾರ ಹಾಕಿದ್ದರು.
ಆದರೆ ಮೂರನೇ ವಿಕೆಟ್ ಗೆ ಜತೆಯಾದ ಪೀಟರ್ ಹ್ಯಾಂಡ್ಸ್ ಕಾಂಬ್ ಮತ್ತು ಉಸ್ಮಾನ್ ಖವಾಜಾ ಜೋಡಿ ಭರ್ಜರಿ 192 ರನ್ ಜತೆಯಾಟವಾಡಿ ಆಸೀಸ್ ಗೆಲುವಿಗೆ ಭದ್ರ ಬುನಾದಿ ಹಾಕಿತು. ಇದರಲ್ಲಿ ಹ್ಯಾಂಡ್ಸ್ ಕಾಂಬ್ ಕೊಡುಗೆ 117 ರನ್ ಗಳಾದರೆ ಖವಾಜಾ 91 ರನ್ ಗಳಿಸಿದರು.
ಹಾಗಿದ್ದರೂ ಕೊನೆಯ ಹಂತದಲ್ಲಿ ಟೀಂ ಇಂಡಿಯಾ ಬೌಲರ್ ಗಳು ರನ್ ನಿಯಂತ್ರಿಸಿದ್ದರೆ ಭಾರತ ಗೆಲುವು ಕಾಣಬಹುದಿತ್ತು. ಆದರೆ ಕೆಳ ಕ್ರಮಾಂಕದಲ್ಲಿ ಸಿಡಿದ ಆಸ್ಟೋನ್ ಟರ್ನರ್ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಕೇವಲ 43 ಎಸೆತಗಳಲ್ಲಿ 84 ರನ್ ಸಿಡಿಸಿದ ಅವರು ಭಾರತದ ಬೌಲಿಂಗ್ ಹುಳುಕನ್ನು ಬಟಾಬಯಲು ಮಾಡಿದರು. ಆಸ್ಟ್ರೇಲಿಯಾ 47.5 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿತು.
ಭಾರತದ ಪರ ಜಸ್ಪ್ರೀತ್ ಬುಮ್ರಾ 8.5 ಓವರ್ ಗಳಲ್ಲಿ 63 ರನ್ ನೀಡಿ 3 ವಿಕೆಟ್ ಕಬಳಿಸಿದ್ದು ಬಿಟ್ಟರೆ ಉಳಿದೆಲ್ಲಾ ಬೌಲರ್ ಗಳು ದುಬಾರಿಯಾದರು. ಇದೀಗ ದೆಹಲಿಯಲ್ಲಿ ನಡೆಯಲಿರುವ ಅಂತಿಮ ಪಂದ್ಯ ಸರಣಿ ನಿರ್ಣಾಯಕ ಪಂದ್ಯವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ