ಭಾರತ-ದ.ಆಫ್ರಿಕಾ ಏಕದಿನ: ಟೀಂ ಇಂಡಿಯಾಗೆ ಹೋರಾಡಿದರೂ ದಕ್ಕದ ಜಯ
ಸೋಮವಾರ, 24 ಜನವರಿ 2022 (08:15 IST)
ಪಾರ್ಲ್: ಭಾರತ ಮತ್ತು ದ.ಆಫ್ರಿಕಾ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಹೋರಾಡಿದರೂ ಟೀಂ ಇಂಡಿಯಾದ ಅದೃಷ್ಟ ಮಾತ್ರ ಬದಲಾಗಲಿಲ್ಲ.
ಮೂರನೇ ಏಕದಿನ ಪಂದ್ಯದಲ್ಲಿ ಇನ್ನೇನು ಗೆಲ್ಲುತ್ತದೆ ಎಂದುಕೊಂಡಿದ್ದಾಗ ಕೊನೆಯ ಹಂತದಲ್ಲಿ ವಿಕೆಟ್ ಕಳೆದುಕೊಂಡು 4 ರನ್ ಗಳಿಂದ ಸೋತು ಸರಣಿ ವೈಟ್ ವಾಶ್ ಅವಮಾನಕ್ಕೀಡಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಆಫ್ರಿಕಾ 287 ರನ್ ಗಳಿಸಿತ್ತು.
ಈ ಮೊತ್ತ ಬೆನ್ನತ್ತಿದ ಟೀಂ ಇಂಡಿಯಾಗೆ ನಾಯಕ ಕೆಎಲ್ ರಾಹುಲ್ ಕೇವಲ 9 ರನ್ ಗಳಿಸಿ ಔಟಾದರೂ, ಶಿಖರ್ ಧವನ್ (61), ವಿರಾಟ್ ಕೊಹ್ಲಿ (65) ಜೋಡಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ ರಿಷಬ್ ಪಂತ್ ಶೂನ್ಯಕ್ಕೆ ನಿರ್ಗಮಿಸಿದ್ದು ಮತ್ತು ಶ್ರೇಯಸ್ ಐಯರ್ ಮತ್ತೆ ಇನಿಂಗ್ಸ್ ಕಟ್ಟಲು ವಿಫಲರಾಗಿದ್ದು ಭಾರತಕ್ಕೆ ದುಬಾರಿಯಾಯಿತು.
ಹಾಗಿದ್ದರೂ ದೀಪಕ್ ಚಹರ್ ಹೊಡೆಬಡಿಯ ಆಟದ ಮೂಲಕ ಗೆಲುವಿನ ಆಸೆ ಚಿಗುರಿಸಿದ್ದರು. ಇನ್ನೇನು ಭಾರತ ಗೆದ್ದೇ ಗೆಲ್ಲುತ್ತದೆ ಎನ್ನುವ ಹಂತದಲ್ಲಿ 34 ಎಸೆತಗಳಲ್ಲಿ 54 ರನ್ ಗಳಿಸಿದ್ದ ದೀಪಕ್ ಚಹರ್ ಔಟಾಗಿ ನಿರಾಸೆ ಅನುಭವಿಸಿದರು. ಇದರೊಂದಿಗೆ ಭಾರತದ ಕುಸಿತ ಆರಂಭವಾಯ್ತು. ಗೆಲುವಿಗೆ 10 ರನ್ ಗಳಿದ್ದಾಗ ಸತತವಾಗಿ ಕೊನೆಯ ಎರಡು ವಿಕೆಟ್ ಕಳೆದುಕೊಂಡು 49.2 ಓವರ್ ಗಳಲ್ಲಿ 283 ರನ್ ಗಳಿಗೆ ಆಲೌಟ್ ಆಗಿ ಸೋಲು ಅನುಭವಿಸುವಂತಾಯಿತು. ಇದರೊಂದಿಗೆ ಭಾರತ ಕೆಎಲ್ ರಾಹುಲ್ ನೇತೃತ್ವದಲ್ಲಿ ಸರಣಿಯ ಎಲ್ಲಾ ಪಂದ್ಯಗಳನ್ನೂ ಸೋತಂತಾಯಿತು.