ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಭಾರತ ಊಟದ ವಿರಾಮದ ವೇಳೆಗೆ 4 ವಿಕೆಟ್ ಕಳೆದುಕೊಂಡು 80 ರನ್ ಗಳಿಸಿದೆ.
ಎರಡನೇ ದಿನವಾದ ಇಂದು ಬ್ಯಾಟಿಂಗ್ ನಲ್ಲಿ ಭಾರತಕ್ಕೆ ಅಗ್ರ ಕ್ರಮಾಂಕ ಕೈಕೊಟ್ಟಿದೆ. ಕೇವಲ 32 ರನ್ ಗಳಿಸಿರುವ ರೋಹಿತ್ ಶರ್ಮಾ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ. ಅವರಿಗೆ ತಕ್ಕ ಸಾಥ್ ನೀಡುತ್ತಿದ್ದ ಅಜಿಂಕ್ಯಾ ರೆಹಾನೆ 27 ರನ್ ಗಳಿಸಿ ಊಟದ ವಿರಾಮಕ್ಕೆ ಮೊದಲು ಜೇಮ್ಸ್ ಆಂಡರ್ಸನ್ ಗೆ ವಿಕೆಟ್ ಒಪ್ಪಿಸಿದ್ದಾರೆ.
ಭಾರತ ಇನ್ನೂ ಮೊದಲನೇ ಇನಿಂಗ್ಸ್ ನಲ್ಲಿ 125 ರನ್ ಗಳ ಹಿನ್ನಡೆಯಲ್ಲಿದೆ. ಸದ್ಯಕ್ಕೆ ರಿಷಬ್ ಪಂತ್, ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ ಸಾಮರ್ಥ್ಯವುಳ್ಳವರು ಕ್ರೀಸ್ ಗೆ ಬರಬೇಕಿದೆ. ಇಂತಹ ಪಿಚ್ ನಲ್ಲಿ ಅಲ್ಪ ಹಿನ್ನಡೆ ಸಾಧಿಸಿದರೂ ದುಬಾರಿಯಾಗಲಿದೆ. ಹೀಗಾಗಿ ಭಾರತ ಇನಿಂಗ್ಸ್ ಮುನ್ನಡೆ ಸಾಧಿಸಲು ಎಲ್ಲಾ ಪ್ರಯತ್ನ ನಡೆಸಲಿದೆ.
ಶಬ್ನಂ ಗಿಲ್ 0, ಚೇತೇಶ್ವರ ಪೂಜಾರ 17, ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಇಂಗ್ಲೆಂಡ್ ಪರ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ 2, ಬೆನ್ ಸ್ಟೋಕ್ಸ್, ಜ್ಯಾಕ್ ಲೀಚ್ ತಲಾ 1 ವಿಕೆಟ್ ಕಬಳಿಸಿದ್ದಾರೆ.