ಟೀಂ ಇಂಡಿಯಾ ಏಷ್ಯಾ ಕಪ್ ಫೈನಲ್ ಗೆ

ಬುಧವಾರ, 13 ಸೆಪ್ಟಂಬರ್ 2023 (08:10 IST)
ಕೊಲೊಂಬೊ: ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ರೋಚಕ ಗೆಲುವು ಸಾಧಿಸಿ ಫೈನಲ್ ಗೆ ಲಗ್ಗೆಯಿಟ್ಟಿದೆ.
 

ನಿನ್ನೆ ನಡೆದ ರೋಚಕ ಹಣಾಹಣಿಯಲ್ಲಿ ಶ್ರೀಲಂಕಾ ತಂಡವನ್ನು 41 ರನ್ ಗಳಿಂದ ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸ್ಪಿನ್ನರ್ ಗಳ ದಾಳಿಗೆ ತತ್ತರಿಸಿ 213 ರನ್ ಗಳಿಗೆ ಆಲೌಟ್ ಆಗಿತ್ತು. ತಿರುವು ಪಡೆಯುತ್ತಿದ್ದ ಪಿಚ್ ನಲ್ಲಿ ಭಾರತೀಯ ಬೌಲರ್ ಗಳೂ ಕಠಿಣ ಸ್ಪರ್ಧೆಯೊಡ್ಡಬಹುದು ಎಂದು ಎಲ್ಲರ ಲೆಕ್ಕಾಚಾರವಾಗಿತ್ತು.

ಅದಕ್ಕೆ ತಕ್ಕಂತೇ ಬೌಲರ್ ಗಳು ಪ್ರದರ್ಶನ ನೀಡಿದರು. ಆರಂಭದಲ್ಲಿ ವೇಗಿಗಳಾದ ಜಸ್ಪ್ರೀತ್ ಬುಮ್ರಾ 2 ವಿಕೆಟ್ ಕಿತ್ತರೆ, ಮೊಹಮ್ಮದ್ ಸಿರಾಜ್ ಕೂಡಾ ಉತ್ತಮ ದಾಳಿ ಸಂಘಟಿಸಿದರು. ಒಂದು ಹಂತದಲ್ಲಿ ಲಂಕಾ 99 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡಾಗ ಟೀಂ ಇಂಡಿಯಾಕ್ಕೆ ಸುಲಭ ಗೆಲುವು ದೊರೆಯಬಹುದು ಎಂದೇ ಎಲ್ಲರ ಲೆಕ್ಕಾಚಾರವಾಗಿತ್ತು.

ಆದರೆ ಬೌಲಿಂಗ್ ನಲ್ಲಿ 5 ವಿಕೆಟ್ ಕಿತ್ತು ಮಿಂಚಿದ್ದ ವೆಲಲಾಗೆ ಧನಂಜಯ ಡಿಸಿಲ್ವಗೆ ಉತ್ತಮ ಸಾಥ್ ಕೊಟ್ಟರು. ಈ ಜೋಡಿ 63 ರನ್ ಗಳ ಜೊತೆಯಾಟವಾಡಿ ಭಾರತಕ್ಕೆ ಆತಂಕ ತಂದಿತ್ತು. ಈ ವೇಳೆ ರವೀಂದ್ರ ಜಡೇಜಾ ಎಸೆತದಲ್ಲಿ ಡಿಸಿಲ್ವ ನೀಡಿದ ಕ್ಯಾಚ್ ನ್ನು ಶುಬ್ಮನ್ ಗಿಲ್ ಪಡೆಯುವುದರೊಂದಿಗೆ ಪಂದ್ಯಕ್ಕೆ ತಿರುವು ಸಿಕ್ಕಿತು. ವೆಲಲಾಗೆ ಅಜೇಯ 42, ಡಿಸಿಲ್ವ 41 ರನ್ ಗಳಿಸಿದರು. ಬಳಿಕ ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್ ಸತತ ವಿಕೆಟ್ ಪಡೆಯುವ ಮೂಲಕ ಲಂಕಾವನ್ನು 41.3 ಓವರ್ ಗಳಲ್ಲಿ 172 ರನ್ ಗಳಿಗೆ ಆಲೌಟ್ ಮಾಡಿದರು. ಕುಲದೀಪ್ ಯಾದವ್ 4 ವಿಕೆಟ್ ಪಡೆದರೆ, ಬುಮ್ರಾ, ಜಡೇಜಾ ತಲಾ 2, ಹಾರ್ದಿಕ್, ಸಿರಾಜ್ ತಲಾ 1 ವಿಕೆಟ್ ತಮ್ಮದಾಗಿಸಿಕೊಂಡರು. ಸೂಪರ್ ಫೋರ್ ಹಂತದಲ್ಲಿ ಎರಡು ಗೆಲುವುಗಳೊಂದಿಗೆ ಭಾರತ ಫೈನಲ್ ಗೆ ಅರ್ಹತೆ ಪಡೆದಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ