ಮುಂಬೈ: ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾ ಕ್ರಿಕೆಟಿಗರು ಭಾರತಕ್ಕೆ ಬಂದಿದ್ದು ಇಂದು ಅಭಿಮಾನಿಗಳ ಸಮ್ಮುಖದಲ್ಲಿ ವಿಜೇತ ತಂಡದ ಮೆರವಣಿಗೆ ನಡೆಯಲಿದೆ.
ಕಳೆದ ಬಾರಿಯೂ T20 ವಿಶ್ವಕಪ್ ಗೆದ್ದಾಗ ಇಡೀ ಟೀಂ ಇಂಡಿಯಾ ಬಳಗ ಸಾರ್ವಜನಿಕವಾಗಿ ತೆರೆದ ಬಸ್ ನಲ್ಲಿ ಮೆರವಣಿಗೆಯಲ್ಲಿ ಸಾಗಿತ್ತು. ಈ ಮೂಲಕ ಅಭಿಮಾನಿಗಳ ಪ್ರೀತಿಗೆ ಧನ್ಯವಾದ ಸಲ್ಲಿಸಿತ್ತು. ಇದೀಗ ಮತ್ತೊಮ್ಮೆ ಅಂತಹದ್ದೇ ಕಾರ್ಯಕ್ರಮ ನಡೆಸಲು ಬಿಸಿಸಿಐ ತಯಾರಿ ಮಾಡಿಕೊಂಡಿದೆ.
2007 ರಲ್ಲಿ ಧೋನಿ ನೇತೃತ್ವದಲ್ಲಿ ಟಿ20 ವಿಶ್ವಕಪ್ ಗೆದ್ದಾಗ ಟೀಂ ಇಂಡಿಯಾ ಕ್ರಿಕೆಟಿಗರನ್ನು ತೆರೆದ ಬಸ್ ನಲ್ಲಿ ರಸ್ತೆಯಲ್ಲಿ ಮೆರವಣಿಗೆ ಮಾಡಲಾಗಿತ್ತು. ಈ ವೇಳೆ ಧೋನಿ ಸೇರಿದಂತೆ ಎಲ್ಲಾ ಆಟಗಾರರೂ ಟ್ರೋಫಿ ಹಿಡಿದು ಸಾವಿರಾರು ಅಭಿಮಾನಿಗಳ ಮಧ್ಯೆ ಸಾಗಿದ್ದರು.
ಇದೀಗ 2024 ರ ಟಿ20 ವಿಶ್ವಕಪ್ ಗೆದ್ದ ಬಳಿಕವೂ ಸಾರ್ವಜನಿಕವಾಗಿ ಮೆರವಣಿಗೆ ಮಾಡಿ ಸಂಭ್ರಮಿಸಲಾಗುತ್ತಿದೆ. ಬಾರ್ಬಡೋಶ್ ನಲ್ಲಿ ಬೆರಿಲ್ ಚಂಡಮಾರುತದಿಂದಾಗಿ ಟೀಂ ಇಂಡಿಯಾ ಕ್ರಿಕೆಟಿಗರು ತಡವಾಗಿ ತವರಿಗೆ ಮರಳಿದ್ದಾರೆ. ಏರ್ ಇಂಡಿಯಾ ವಿಶೇಷ ವಿಮಾನದ ಮೂಲಕ ಅವರನ್ನು ಸ್ವದೇಶಕ್ಕೆ ಕರೆತರಲಾಗಿದೆ. ಇಂದು ಮಧ್ಯಾಹ್ನ ಪ್ರಧಾನಿ ಮೋದಿ ಜೊತೆ ಔತಣಕೂಟ ಏರ್ಪಡಿಸಲಾಗಿದೆ. ಇಂದು ಸಂಜೆ ಮುಂಬೈನಲ್ಲಿ ನಾರಿಮನ್ ಪಾಯಿಂಟ್ ನಿಂದ ಕ್ರಿಕೆಟಿಗರ ರೋಡ್ ಶೋ ಆರಂಭವಾಗಲಿದೆ.