ವಿಶಾಖಪಟ್ಟಣ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 107 ರನ್ ಗಳಿಂದ ಗೆದ್ದುಕೊಂಡು ಸರಣಿ ಜೀವಂತವಾಗಿರಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ರೋಹಿತ್ ಶರ್ಮಾ (159) ಮತ್ತು ಕೆಎಲ್ ರಾಹುಲ್ (102), ಶ್ರೇಯಸ್ ಅಯ್ಯರ್ (53) ಮತ್ತು ರಿಷಬ್ ಪಂತ್ (39) ಅಬ್ಬರದ ಬ್ಯಾಟಿಂಗ್ ನಿಂದಾಗಿ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 387 ರನ್ ಗಳಿಸಿತ್ತು.
ಈ ಬೃಹತ್ ಮೊತ್ತವನ್ನು ವಿಂಡೀಸ್ ಆರಂಭದಲ್ಲಿಯೇ ಆತ್ಮವಿಶ್ವಾಸದಿಂದಲೇ ಬೆನ್ನು ಹತ್ತಿತ್ತು. ಆದರೆ ಶ್ರಾದ್ಧೂಲ್ ಠಾಕೂರ್ ಭಾರತಕ್ಕೆ ಮೊದಲ ಬ್ರೇಕ್ ಒದಗಿಸಿಕೊಟ್ಟರು. ಅದಾದ ಬಳಿಕ ಹೆಟ್ ಮ್ಯಾರ್, ರೋಸ್ಟನ್ ಚೇಸ್ ವಿಕೆಟ್ ಗಳನ್ನು ಬೇಗನೇ ಕಳೆದುಕೊಂಡ ವಿಂಡೀಸ್ ಸಂಕಷ್ಟಕ್ಕೆ ಸಿಲುಕಿತು. ಆದರೆ ಈ ವೇಳೆ ಆರಂಭಿಕ ಶೈ ಹೋಪ್ ಗೆ ಜತೆಯಾದ ನಿಕಲಸ್ ಪೂರನ್ ಅಪಾಯಕಾರಿಯಾಗುವ ಸೂಚನೆ ನೀಡಿದರು. ಆದರೆ ಈ ವೇಳೆ ದಾಳಿಗಿಳಿದ ಮೊಹಮ್ಮದ್ ಶಮಿ 47 ಎಸೆತಗಳಿಂದ 75 ರನ್ ಗಳಿಸಿದ್ದ ಪೂರನ್ ವಿಕೆಟ್ ಕಬಳಿಸಿದರು. ಅದಾದ ಬಳಿಕ ನಾಯಕ ಪೊಲ್ಲಾರ್ಡ್ ಕೂಡಾ ಶೂನ್ಯಕ್ಕೆ ನಿರ್ಗಮಿಸಿದರು. ನಂತರ ಹೋಪ್ ಕೂಡಾ 78 ರನ್ ಗೆ ವಿಕೆಟ್ ಒಪ್ಪಿಸಿದಾಗ ಭಾರತದ ಜಯದ ಹಾದಿ ಸುಲಭವಾಯಿತು.
ಈ ನಡುವೆ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ಕುಲದೀಪ್ ಯಾದವ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ ಎರಡು ಬಾರಿ ಹ್ಯಾಟ್ರಿಕ್ ಸಾಧನೆ ಮಾಡಿದ ಭಾರತದ ಮೊದಲ ಬೌಲರ್ ಎನಿಸಿಕೊಂಡರು. ಅಂತಿಮವಾಗಿ ವಿಂಡೀಸ್ 43.3. ಓವರ್ ಗಳಲ್ಲಿ 280 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರ ಶ್ರಾದ್ಧೂಲ್ ಠಾಕೂರ್ 1, ಮೊಹಮ್ಮದ್ ಶಮಿ ಮತ್ತು ಕುಲದೀಪ್ ಯಾದವ್ ತಲಾ 3 ಮತ್ತು ರವೀಂದ್ರ ಜಡೇಜಾ 2 ವಿಕೆಟ್ ಕಬಳಿಸಿದರು.