ಮುಂಬೈ: ಇದೇ ಜೂನ್ ಅಂತ್ಯಕ್ಕೆ ಅಧಿಕಾರಾವಧಿ ಮುಗಿಸುತ್ತಿರುವ ಕೋಚ್ ರಾಹುಲ್ ದ್ರಾವಿಡ್ ಗೆ ತಂಡದಲ್ಲಿರುವ ಹಿರಿಯ ಆಟಗಾರರು ಹುದ್ದೆ ತ್ಯಜಿಸದಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಇದಕ್ಕೆ ದ್ರಾವಿಡ್ ಪ್ರತಿಕ್ರಿಯೆ ಏನಾಗಿತ್ತು ಎಂದು ನೋಡಿ.
ಈಗಾಗಲೇ ಟೀಂ ಇಂಡಿಯಾ ಹೊಸ ಕೋಚ್ ಹುಡುಕಾಟಕ್ಕೆ ಅರ್ಜಿ ಆಹ್ವಾನಿಸಿದೆ. ಕೆಲವರು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಒಂದು ವೇಳೆ ದ್ರಾವಿಡ್ ಮುಂದುವರಿಯಲು ಬಯಸಿದರೆ ಅವರು ಮತ್ತೊಮ್ಮೆ ಅರ್ಜಿ ಸಲ್ಲಿಸಬಹುದು ಎಂದು ಬಿಸಿಸಿಐ ಹೇಳಿದೆ. ಆದರೆ ದ್ರಾವಿಡ್ ಗೆ ಮುಂದುವರಿಯಲು ಆಸಕ್ತಿಯಿಲ್ಲ ಎನ್ನಲಾಗಿದೆ.
ಇತ್ತ ಟೀಂ ಇಂಡಿಯಾದ ಹಿರಿಯ ಆಟಗಾರರೂ ದ್ರಾವಿಡ್ ಮನವೊಲಿಕೆಗೆ ಪ್ರಯತ್ನ ನಡೆಸಿದ್ದಾರೆ. ದ್ರಾವಿಡ್ ಗೆ ಹುದ್ದೆ ತ್ಯಜಿಸಿದಂತೆ ಮನವಿ ಮಾಡಿದ್ದರು. ಆದರೆ ದ್ರಾವಿಡ್ ಇದಕ್ಕೆ ಒಪ್ಪಿಲ್ಲ ಎನ್ನಲಾಗಿದೆ. ತಂಡದ ಆಟಗಾರರಿಗೆ ದ್ರಾವಿಡ್ ಕಾರ್ಯವೈಖರಿ ಬಗ್ಗೆ ತೃಪ್ತಿಯಿದೆ. ಹಿರಿಯ ಆಟಗಾರರಿಗೂ ಅವರ ಜೊತೆ ಉತ್ತಮ ಬಾಂಧವ್ಯವಿದೆ. ಹೀಗಾಗಿ ಮುಂದುವರಿಯಲು ಮನವಿ ಮಾಡಿದ್ದರು.
ಇನ್ನೊಂದೆಡೆ ಕೋಚ್ ಸ್ಥಾನಕ್ಕೆ ವಿವಿಎಸ್ ಲಕ್ಷ್ಮಣ್ ಹೆಸರು ಕೇಳಿಬರುತ್ತಿತ್ತು. ಆದರೆ ಲಕ್ಷ್ಮಣ್ ಕೂಡಾ ಅರ್ಜಿ ಸಲ್ಲಿಸುತ್ತಿಲ್ಲ ಎಂಬ ಮಾಹಿತಿಯಿದೆ. ಹೀಗಾಗಿ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ವೀ ಕೋಚ್ ಸ್ಟೀಫನ್ ಫ್ಲೆಮಿಂಗ್ ಹೆಸರು ಮುನ್ನಲೆಗೆ ಬಂದಿದೆ. ಅಂತಿಮವಾಗಿ ಟೀಂ ಇಂಡಿಯಾದ ಕೋಚ್ ಯಾರಾಗುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.