ಟೀಂ ಇಂಡಿಯಾ ಕೋಚ್ ಆಗಿ ಈ ವ್ಯಕ್ತಿ ಬಂದರೆ ವಿರಾಟ್ ಕೊಹ್ಲಿ ತಂಡದಲ್ಲಿರೋದು ಅನುಮಾನ

Krishnaveni K

ಸೋಮವಾರ, 13 ಮೇ 2024 (11:58 IST)
Photo Courtesy: Twitter
ಮುಂಬೈ: ಇನ್ನೇನು ಕೆಲವೇ ದಿನಗಳಲ್ಲಿ ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಕೋಚ್ ಹುದ್ದೆಯಿಂದ ನಿರ್ಗಮಿಸಲಿದ್ದಾರೆ. ಅವರ ಸ್ಥಾನಕ್ಕೆ ಹೊಸ ಕೋಚ್ ಹುಡುಕಾಟ ಶುರುವಾಗಿದೆ.

ಬಿಸಿಸಿಐ ಈಗಾಗಲೇ ನೂತನ ಕೋಚ್ ಗಾಗಿ ಅರ್ಜಿ ಸಲ್ಲಿಸಲು ಜಾಹೀರಾತು ನೀಡಿದೆ. ಒಂದು ವೇಳೆ ದ್ರಾವಿಡ್ ಮತ್ತೆ ಹುದ್ದೆಯಲ್ಲಿ ಮುಂದುವರಿಯಲು ಬಯಸಿದರೆ ಅವರೂ ಮತ್ತೊಮ್ಮೆ ಅರ್ಜಿ ಹಾಕಬೇಕಾಗುತ್ತದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ದ್ರಾವಿಡ್ ಮತ್ತೊಂದು ಅವಧಿಗೆ ಮುಂದುವರಿಯಲು ಆಸಕ್ತಿ ವಹಿಸಿಲ್ಲ ಎನ್ನಲಾಗಿದೆ.

ಹೀಗಾದಲ್ಲಿ ತಂಡಕ್ಕೆ ಹೊಸ ಕೋಚ್ ನೇಮಕ ಮಾಡಬೇಕಾಗುತ್ತದೆ. ಸದ್ಯಕ್ಕೆ ಟೀಂ ಇಂಡಿಯಾ ಮುಂದಿನ ಕೋಚ್ ಹುದ್ದೆಗೆ ಮೂವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಅವರೆಂದರೆ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್, ಎನ್ ಸಿಎ ಮುಖ್ಯಸ್ಥ, ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಮತ್ತು ಆಸ್ಟ್ರೇಲಿಯಾ ಮೂಲದ ರಿಕಿ ಪಾಂಟಿಂಗ್.

ಬಿಸಿಸಿಐ ಮತ್ತೊಮ್ಮೆ ನಮ್ಮದೇ ದೇಶದ ಕೋಚ್ ಗೆ ಮಣೆ ಹಾಕುವುದಿದ್ದರೆ ವಿವಿಎಸ್ ಲಕ್ಷ್ಮಣ್, ಗಂಭೀರ್ ಅಥವಾ ಬೇರೆ ಯಾರಿಗಾದರೂ ಅವಕಾಶ ಸಿಗಬಹುದು. ಸದ್ಯಕ್ಕೆ ಗಂಭೀರ್ ಈ ವರ್ಷವಷ್ಟೇ ಕೆಕೆಆರ್ ಫ್ರಾಂಚೈಸಿಸೇರಿಕೊಂಡಿದ್ದು ಒಂದೇ ವರ್ಷಕ್ಕೆ ಕೆಕೆಆರ್ ತಂಡ ಬಿಟ್ಟು ಬರಬಹುದೇ ಎನ್ನುವ ಪ್ರಶ್ನೆಯಿದೆ. ಜೊತೆಗೆ ಗಂಭೀರ್ ಮತ್ತು ಕೊಹ್ಲಿ ನಡುವೆ ಹಿಂದೆ ಕಲಹಗಳಾಗಿತ್ತು. ಈಗ ಗಂಭೀರ್ ತಂಡಕ್ಕೆ ಬಂದರೆ ಕೊಹ್ಲಿ ಜೊತೆ ಶೀತಲ ಸಮರ ಮುಂದುವರಿಸಬಹುದು ಎಂಬ ಆತಂಕವಿದೆ. ಜೊತೆಗೆ ಗಂಭೀರ್ ಇರುವ ತಂಡದಲ್ಲಿ ಕೊಹ್ಲಿ ಇರುತ್ತಾರೆಯೇ ಅಥವಾ ಕೊಹ್ಲಿ ಇರುವ ತಂಡಕ್ಕೆ ಗಂಭೀರ್ ಬರಬಹುದೇ ಎಂಬ ಪ್ರಶ್ನೆಯೂ ಇದೆ.

ಇತ್ತ ವಿವಿಎಸ್ ಲಕ್ಷ್ಮಣ್ ಮತ್ತೊಬ್ಬ ಪ್ರಬಲ ಸ್ಪರ್ಧಿಯಾಗಿದ್ದಾರೆ. ದ್ರಾವಿಡ್ ಅನುಪಸ್ಥಿತಿಯಲ್ಲಿ ಲಕ್ಷ್ಮಣ್ ಟಿ20 ಸರಣಿಗಳಲ್ಲಿ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿ ಯಶಸ್ವಿಯಾಗಿದ್ದರು. ಹೀಗಾಗಿ ಅವರಿಗೆ ಮೊದಲ ಆದ್ಯತೆ ಸಿಗುವ ಸಾಧ್ಯತೆಯಿದೆ. ಸದ್ಯಕ್ಕೆ ಅವರು ಎನ್ ಸಿಎ ಅಧ್ಯಕ್ಷರಾಗಿದ್ದು ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದಾರೆ. ಈ ಮೂವರಲ್ಲದೆ ಕೋಚ್ ಹುದ್ದೆಗೆ ಹೊಸ ಸ್ಪರ್ಧಿ ಎಂಟ್ರಿಯಾಗುತ್ತಾರಾ ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ