ಮುಂಬೈ: ಟೀಂ ಇಂಡಿಯಾಕ್ಕೆ ಸೇರಿ ಸ್ಟಾರ್ ಪಟ್ಟ ಸಿಕ್ಕ ಮೇಲೆ ಕ್ರಿಕೆಟಿಗರನ್ನು ಹಿಡಿಯುವವರೇ ಇಲ್ಲ ಎನ್ನುವ ಪರಿಸ್ಥಿತಿಯಿತ್ತು. ಆದರೆ ಈಗ ಕೋಚ್ ಗೌತಮ್ ಗಂಭೀರ್, ಬಿಸಿಸಿಐ ಖಡಕ್ ನಿಯಮದಿಂದಾಗಿ ಹಿರಿಯ ಆಟಗಾರರ ಪರಿಸ್ಥಿತಿ ಏನಾಗಿದೆ ನೋಡಿ.
ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗರು ಕಳೆದ ಎರಡು ಪ್ರಮುಖ ಸರಣಿಗಳಲ್ಲಿ ಕಳೆಗುಂದಿರುವುದರಿಂದ ಕೋಚ್ ಗೌತಮ್ ಗಂಭೀರ್ ಮತ್ತು ಬಿಸಿಸಿಐ ಖಡಕ್ ನಿಯಮವೊಂದನ್ನು ಜಾರಿಗೆ ತಂದಿದೆ. ಅದರಂತೆ ಎಲ್ಲಾ ಕ್ರಿಕೆಟಿಗರೂ ರಣಜಿ ಪಂದ್ಯಗಳನ್ನು ಆಡಲೇಬೇಕೆಂದು ಕಡ್ಡಾಯ ಮಾಡಿದೆ.
ಪರಿಣಾಮ ಈಗ ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲಾ ಪ್ರಮುಖ ಆಟಗಾರರೂ ಹಿರಿ-ಕಿರಿಯ, ಸ್ಟಾರ್ ಗಳೆಂಬ ಬೇದಭಾವವಿಲ್ಲದೇ ದೇಶೀಯ ಟೂರ್ನಿ ಕಡೆಗೆ ಗಮನ ಹರಿಸಿದ್ದಾರೆ. ಇಷ್ಟು ದಿನ ರಣಜಿ ಕ್ರಿಕೆಟ್ ಇರಲಿ, ಯಾವುದೇ ದೇಶೀಯ ಕ್ರಿಕೆಟ್ ಕಡೆಗೆ ತಲೆಯೂ ಹಾಕಿರದ ಸ್ಟಾರ್ ಕ್ರಿಕೆಟಿಗರು ತಮ್ಮ ಸ್ಟಾರ್ ಗಿರಿ ಹಮ್ಮು ಬಿಟ್ಟು ರಣಜಿ ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.
ರೋಹಿತ್ ಶರ್ಮಾ ಬಹಳ ದಿನಗಳ ನಂತರ ಮುಂಬೈ ರಣಜಿ ಜೆರ್ಸಿಯಲ್ಲಿ ಅಭ್ಯಾಸ ಮಾಡುತ್ತಿರುವ ಫೋಟೋ ವೈರಲ್ ಆಗಿದೆ. ಮೊಹಮ್ಮದ್ ಸಿರಾಜ್ ಹೈದರಾಬಾದ್ ತಂಡದ ಜೊತೆಗೆ ರಣಜಿ ಪಂದ್ಯಕ್ಕೆ ಅಭ್ಯಾಸ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ. ವಿರಾಟ್ ಕೊಹ್ಲಿ ಕೂಡಾ ರಣಜಿ ಪಂದ್ಯದಲ್ಲಿ ಭಾಗಿಯಾಗಲಿದ್ದಾರೆ. ಉಳಿದಂತೆ ಶುಬ್ಮನ್ ಗಿಲ್, ರವೀಂದ್ರ ಜಡೇಜಾ ಸೇರಿದಂತೆ ಘಟಾನುಘಟಿ ಆಟಗಾರರೆಲ್ಲರೂ ರಣಜಿ ಪಂದ್ಯದಲ್ಲಿ ಭಾಗಿಯಾಗಲಿದ್ದಾರೆ. ಕೇವಲ ಗಾಯಗೊಂಡಿರುವ ಜಸ್ಪ್ರೀತ್ ಬುಮ್ರಾ ಮತ್ತು ಕೌಟುಂಬಿಕ ಕಾರಣಗಳಿಗೆ ಬ್ರೇಕ್ ಪಡೆದಿರುವ ಕೆಎಲ್ ರಾಹುಲ್ ಮಾತ್ರ ರಣಜಿಯಿಂದ ಹೊರಗುಳಿಯಲಿದ್ದಾರೆ. ನಾಳೆಯಿಂದ ರಣಜಿ ಟ್ರೋಫಿ ಪಂದ್ಯಗಳು ಆರಂಭವಾಗಲಿದೆ.