ಪಲ್ಲೆಕೆಲೆ: ದ್ವೀಪ ರಾಷ್ಟ್ರ ಪ್ರವಾಸ ಮಾಡಿರುವ ಟೀಂ ಇಂಡಿಯಾ ಇದುವರೆಗೆ ನಡೆದ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದು ಮೂರನೇ ಟೆಸ್ಟ್ ಗೆ ಸಜ್ಜಾಗಿದೆ. ಇದೀಗ ಯಾರೂ ಮಾಡದ ದಾಖಲೆ ನಿರ್ಮಿಸುವ ಉತ್ಸಾಹದಲ್ಲಿದೆ.
ಭಾರತ ತಂಡ ಇದುವರೆಗೆ ವಿದೇಶಗಳಲ್ಲಿ ಸರಣಿ ಗೆದ್ದಿದ್ದರೂ, ಕ್ಲೀನ್ ಸ್ವೀಪ್ ಮಾಡಿಕೊಂಡಿರಲಿಲ್ಲ. ಇದೀಗ ದುರ್ಬಲ ಲಂಕಾವನ್ನು ವೈಟ್ ವಾಶ್ ಮಾಡುವ ಮೂಲಕ ಮೊದಲ ಬಾರಿಗೆ ಈ ದಾಖಲೆ ಮಾಡುವ ಉತ್ಸಾಹದೊಂದಿಗೆ ಕೊಹ್ಲಿ ಪಡೆ ಇಂದು ಕಣಕ್ಕಿಳಿಯುತ್ತಿದೆ.
ಭಾರತ ತಂಡಕ್ಕೆ ವಿಶ್ವ ನಂ.1 ಆಲ್ ರೌಂಡರ್ ಜಡೇಜಾ ಅನುಪಸ್ಥಿತಿಯಿದ್ದರೂ, ಕೊರತೆಯಾಗಿ ಕಾಣದು. ಅವರ ಜಾಗ ತುಂಬಲು ಕುಲದೀಪ್ ಯಾದವ್ ಸಜ್ಜಾಗಿದ್ದಾರೆ. ಆದರೆ ಲಂಕಾ ಮಾತ್ರ ಎಲ್ಲಾ ವಿಭಾಗಗಳಲ್ಲೂ ಬರಗಾಲ ಎದುರಿಸುತ್ತಿದೆ.
ಇದುವರೆಗೆ ನಡೆದ ಎರಡೂ ಪಂದ್ಯಗಳಲ್ಲಿ ದ್ವಿತೀಯ ಟೆಸ್ಟ್ ನ ದ್ವಿತೀಯ ಇನಿಂಗ್ಸ್ ನಲ್ಲಿ ಕೊಂಚ ಹೊತ್ತು ಬಿಟ್ಟರೆ ಉಳಿದೆಲ್ಲಾ ಅವಧಿಗಳಲ್ಲೂ ಟೀಂ ಇಂಡಿಯಾಕ್ಕೆ ಲಂಕಾ ಯಾವುದೇ ಹಂತದಲ್ಲೂ ಸಾಟಿಯಾಗಿರಲಿಲ್ಲ. ಹೀಗಾಗಿ ಯಾರೂ ಮಾಡದ ದಾಖಲೆಯನ್ನು ಈ ಪಂದ್ಯವನ್ನು ಗೆಲ್ಲುವ ಮೂಲಕ ಕೊಹ್ಲಿ ಪಡೆ ಮಾಡಲಿದೆ ಎಂಬ ಲೆಕ್ಕಾಚಾರದಲ್ಲಿ ಅಭಿಮಾನಿಗಳಿದ್ದಾರೆ.
ಆದರೆ ಎಲ್ಲದಕ್ಕೂ ಹವಾಮಾನ ಅನುವು ಮಾಡಿಕೊಡಬೇಕು. ಇಲ್ಲಿ ತುಂತುರು ಮಳೆಯಾಗುವ ನಿರೀಕ್ಷೆಯಿದ್ದು, ಭಾರತದ ಕನಸಿಗೆ ನೀರೆರಚದಿದ್ದರೆ ಸಾಕು ಎಂಬ ಪರಿಸ್ಥಿತಿಯಿದೆ. ತೇವಾಂಶ ಹೆಚ್ಚಿರುವ ಕಾರಣ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡುವುದೇ ಒಳ್ಳೆಯದು. ಹಾಗಿದ್ದರೂ ಭಾರತದ ದಾಖಲೆ ಈ ಮೈದಾನದಲ್ಲಿ ಉತ್ತಮವಾಗಿಯೇ ಇದೆ ಎನ್ನುವುದು ಪ್ಲಸ್ ಪಾಯಿಂಟ್.