ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 6 ವಿಕೆಟ್ ಗಳಿಂದ ಸೋಲಿಸಿ ಸರಣಿ ಜೀವಂತವಿಟ್ಟಿದೆ.
ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಗೆಲುವಿಗೆ 299 ರನ್ ಗಳ ಗುರಿ ನಿಗದಿಪಡಿಸಿತ್ತು. ಈ ಮೊತ್ತ ಬೆನ್ನಟ್ಟಿದ ಭಾರತದ ಆರಂಭ ಉತ್ತಮವಾಗಿಯೇ ಇತ್ತು. ಶಿಖರ್ ಧವನ್ 32, ರೋಹಿತ್ ಶರ್ಮಾ 43 ರನ್ ಗಳಿಸಿದರು. ಧವನ್ ಔಟಾದ ಬಳಿಕ ರೋಹಿತ್ ಕೂಡಿಕೊಂಡ ನಾಯಕ ಕೊಹ್ಲಿ ಅದ್ಭುತ ಆಟವಾಡಿ ಏಕದಿನ ಪಂದ್ಯದಲ್ಲಿ 39 ನೇ ಶತಕ ದಾಖಲಿಸಿದರು. ಆದರೆ 104 ಗಳಿಸಿದಾಗ ಅವರೂ ಔಟಾದಾಗ ಭಾರತಕ್ಕೆ ಸೋಲಿನ ಭೀತಿ ಎದುರಾಯಿತು.
ಈ ಸಂದರ್ಭದಲ್ಲಿ ಜತೆಯಾದ ಧೋನಿ ಮತ್ತು ದಿನೇಶ್ ಕಾರ್ತಿಕ್ ಭಾರತವನ್ನು ಗೆಲುವಿನ ದಡ ಮುಟ್ಟಸಿದರು. ಅದರಲ್ಲೂ ಮುಖ್ಯವಾಗಿ ಜವಾಬ್ಧಾರಿಯುತ ಆಟವಾಡಿದ ಧೋನಿ ಅರ್ಧಶತಕ ಗಳಿಸಿದರು. ಅಲ್ಲದೆ, ಕಳೆದ ಕೆಲವು ದಿನಗಳಿಂದ ನಿಧಾನಗತಿಯ ಆಟವಾಡಿ ಭಾರತದ ಪಾಲಿನ ವಿಲನ್ ಎಂಬ ಟೀಕೆಗೊಳಗಾಗುತ್ತಿದ್ದ ಧೋನಿ ಆ ಅಪವಾದವನ್ನು ಈ ಗೆಲುವಿನ ಮೂಲಕ ತೊಡೆದು ಹಾಕಿದರು. ಅಂತಿಮಾಗಿ ಭಾರತ 49.2 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ಮುಟ್ಟಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿ ಸರಣಿ ಜೀವಂತವಾಗಿಸಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ