ಮುಂಬೈ: ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ನಾಯಕತ್ವದಿಂದ ರೋಹಿತ್ ಶರ್ಮಾರನ್ನು ಕಿತ್ತು ಹಾಕಿದ ಬಳಿಕ ಅವರು ಬೇರೆ ತಂಡ ಸೇರಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಲೇ ಇದೆ.
ಇದೀಗ ಮುಂದಿನ ಐಪಿಎಲ್ ಗೆ ರೋಹಿತ್ ಬೇರೆ ತಂಡ ಸೇರಿಕೊಳ್ಳುವುದು ಖಚಿತ ಎನ್ನಲಾಗುತ್ತಿದೆ. ನಾಯಕತ್ವದಿಂದ ರೋಹಿತ್ ರನ್ನು ಕಿತ್ತು ಹಾಕಿದ ಮೇಲೆ ಮುಂಬೈ ತಂಡ ಒಡೆದ ಮನೆಯಂತಾಗಿದೆ. ಹೀಗಾಗಿ ರೋಹಿತ್ ಮುಂದಿನ ಐಪಿಎಲ್ ಗೆ ಮೊದಲು ನಡೆಯಲಿರುವ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಬೇರೆ ತಂಡ ಸೇರಿಕೊಳ್ಳುವುದು ಪಕ್ಕಾ ಎನ್ನಲಾಗಿದೆ.
ರೋಹಿತ್ ರನ್ನು ಖರೀದಿ ಮಾಡಲು ತಂಡಗಳು ಕ್ಯೂ ನಿಂತಿವೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ರೋಹಿತ್ ಶರ್ಮಾರನ್ನು ಖರೀದಿ ಮಾಡಲು ಆಸಕ್ತಿ ತೋರಿದೆ ಎಂದು ಸುದ್ದಿ ಹಬ್ಬಿತ್ತು. ಇದಕ್ಕಾಗಿ ರೋಹಿತ್ ಗೆ ಎಷ್ಟು ಕೋಟಿ ಕೊಡಲೂ ಡೆಲ್ಲಿ ತಂಡ ತಯಾರಾಗಿದೆ ಎನ್ನಲಾಗಿದೆ.
ಇದರ ನಡುವೆ ಲಕ್ನೋ ಸೂಪರ್ ಜೈಂಟ್ಸ್ ಕೂಡಾ ರೋಹಿತ್ ಗಾಗಿ ಟವೆಲ್ ಹಾಕಿ ಕೂತಿದೆ. ಮುಂದಿನ ಐಪಿಎಲ್ ನಲ್ಲಿ ರೋಹಿತ್ ಹರಾಜಿಗೆ ಬಂದರೆ ನಾವು ಎಷ್ಟು ಕೋಟಿ ಕೊಟ್ಟಾದರೂ ಸರಿ ಅವರನ್ನು ಖರೀದಿ ಮಾಡುತ್ತೇವೆ ಎಂದು ಲಕ್ನೋ ಕೋಚ್ ಹೇಳಿಕೊಂಡಿದ್ದಾರೆ.
ಇತ್ತ ಚೆನ್ನೈ ಸೂಪರ್ ಕಿಂಗ್ಸ್ ಕೂಡಾ ರೋಹಿತ್ ಮೇಲೆ ಕಣ‍್ಣಿಟ್ಟಿದೆಯಂತೆ. ಒಂದು ವೇಳೆ ಋತುರಾಜ್ ಗಾಯಕ್ ವಾಡ್ ಕ್ಲಿಕ್ ಆಗದೇ ಹೋದರೆ ಮುಂದಿನ ಋತುವಿಗೆ ರೋಹಿತ್ ರನ್ನು ಖರೀದಿಸಿ ಅವರನ್ನೇ ನಾಯಕನಾಗಿ ಮಾಡಬಹುದು. ರೋಹಿತ್ ಹಳದಿ ಜೆರ್ಸಿಯಲ್ಲಿ ನಿವೃತ್ತಿಯಾಗಲಿ ಎಂದು ಚೆನ್ನೈ ಮಾಜಿ ಆಟಗಾರ ಅಂಬಟಿ ರಾಯುಡು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ರೋಹಿತ್ ಮುಂಬೈ ತಂಡದಿಂದ ಕಾಲು ಹೊರಗಿಡುವುದನ್ನೇ ಇತರೆ ತಂಡಗಳು ಕಾದು ಕೂತಿರುವಂತಿದೆ.