Virat Kohli birthday: ವಿರಾಟ್ ಕೊಹ್ಲಿ ಎದುರಾಳಿಗಳನ್ನು ಸೈಲೆಂಟ್ ಮಾಡಿದ ಟಾಪ್ 5 ಘಟನೆಗಳು

Krishnaveni K

ಮಂಗಳವಾರ, 5 ನವೆಂಬರ್ 2024 (09:58 IST)
Photo Credit: X
ಮುಂಬೈ: ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿಗೆ ಇಂದು ಜನ್ಮದಿನದ ಸಂಭ್ರಮ. ಕೊಹ್ಲಿ ಇಂದು 36 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಆಕ್ರಮಣಕಾರೀ ವರ್ತನೆಗಳಿಂದಲೇ ಎದುರಾಳಿಗಳನ್ನು ಸೈಲೆಂಟ್ ಮಾಡುತ್ತಿದ್ದ ವಿರಾಟ್ ಕೊಹ್ಲಿಯ ಟಾಪ್ 5 ಘಟನೆಗಳು ಇಲ್ಲಿದೆ ನೋಡಿ.

ತಲೆಗೆ ಹೊಡೆಯುತ್ತೇನೆಂದಿದ್ದ ಮಿಚೆಲ್ ಜಾನ್ಸನ್ ಗೆ ಪ್ರತ್ಯುತ್ತರ ನೀಡಿದ ವಿರಾಟ್ ಕೊಹ್ಲಿ
ಆಸ್ಟ್ರೇಲಿಯಾ ಕ್ರಿಕೆಟಿಗರೆಂದರೆ ಮೈದಾನದಲ್ಲಿಯೇ ಸ್ಲೆಡ್ಜಿಂಗ್ ಮಾಡಿ ಎದುರಾಳಿಗಳನ್ನು ಕೆಣಕುವುದರಲ್ಲಿ ನಿಸ್ಸೀಮರು. ಆದರೆ ಆಸೀಸ್ ಆಟಗಾರರನ್ನು ಅವರದೇ ಹಾದಿಯಲ್ಲಿ ಸೈಲೆಂಟ್ ಮಾಡಿದ್ದು ವಿರಾಟ್ ಕೊಹ್ಲಿ. 2014 ರ ಟೆಸ್ಟ್ ಸರಣಿಯಲ್ಲಿ ಮಿಚೆಲ್ ಜಾನ್ಸನ್ ಪದೇ ಪದೇ ವಿರಾಟ್ ಕೊಹ್ಲಿ ಮೈಗೆ ಚೆಂಡು ಎಸೆದು ಕೆಣಕುತ್ತಿದ್ದರು. ಕೇಳಲು ಹೋಗಿದ್ದಕ್ಕೆ ನಿನ್ನ ತಲೆಗೇ ಹೊಡೆಯುತ್ತೇನೆ ಎಂದಿದ್ದರು. ಇದಕ್ಕೆ ಕೊಹ್ಲಿ ತಾಕತ್ತಿದ್ದರೆ ನನ್ನ ವಿಕೆಟ್ ಕಡೆಗೆ ಚೆಂಡೆಸೆ ಎಂದಿದ್ದರು. ಅಷ್ಟೇ ಅಲ್ಲ, ಆ ಪಂದ್ಯದಲ್ಲಿ ಜಾನ್ಸನ್ ಬೌಲಿಂಗ್ ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ ಅವರ ತಲೆ ಕೆಡಿಸಿದ್ದರು.

ಸ್ಟೀವ್ ಸ್ಮಿತ್ ಜೊತೆಗೆ ಜಗಳ
2014 ರ ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಸ್ಟೀವ್ ಸ್ಮಿತ್ ಜೊತೆಗೂ ಕೊಹ್ಲಿಗೆ ಮೈದಾನದಲ್ಲಿ ಘರ್ಷಣೆಯಾಗಿತ್ತು. ಇವರಿಬ್ಬರ ಜಗಳ ಬಿಡಿಸಲು ಕೊನೆಗೆ ಅಂಪಾಯರ್ ಬರಬೇಕಾಯಿತು. ಒಂದು ಹಂತದಲ್ಲಿ ವಿರಾಟ್ ಕೊಹ್ಲಿ ಪತ್ರಿಕಾಗೋಷ್ಠಿಯಲ್ಲೇ ಸ್ಮಿತ್ ಜೊತೆಗೆ ನಾನು ಯಾವತ್ತೂ ಸ್ನೇಹಿತನಾಗಲು ಸಾಧ್ಯವಿಲ್ಲ ಎಂದಿದ್ದರು. ಆದರೆ ಬಳಿಕ ಸ್ಮಿತ್ ಜೊತೆಗೆ ಉತ್ತಮ ಬಾಂಧವ್ಯ ಕಾಪಾಡಿಕೊಂಡು ಬಂದಿದ್ದರು.

ಗೌತಮ್ ಗಂಭೀರ್ ಜೊತೆ ಮೈದಾನದಲ್ಲಿ ಕಿತ್ತಾಟ
ಐಪಿಎಲ್ ಟೂರ್ನಿಯಲ್ಲಿ ಎದುರಾಳಿ ಆಟಗಾರರಾಗಿದ್ದ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ನಡುವೆ ಹಲವು ಬಾರಿ ಕಿತ್ತಾಟ ನಡೆದಿತ್ತು. ಇಬ್ಬರ ಜಗಳ ಬಿಡಿಸಲು ಅಂಪಾಯರ್ ಗಳೇ ಬರಬೇಕಾಗಿತ್ತು. ಗಂಭೀರ್ ಚಿನ್ನಸ್ವಾಮಿ ಪ್ರೇಕ್ಷಕರತ್ತ ಒಮ್ಮೆ ಕೈ ಸನ್ನೆ ಮಾಡಿ ಸೈಲೆಂಟ್ ಎಂದಿದ್ದರು. ಇದಕ್ಕೆ ಇನ್ನೊಂದು ಪಂದ್ಯದಲ್ಲಿ ಲಕ್ನೋವನ್ನು ಸೋಲಿಸಿ ಕೊಹ್ಲಿ ಕೂಡಾ ಸೈಲೆಂಟ್ ಎಂದು ಸನ್ನೆ ಮಾಡಿ ತಿರುಗೇಟು ನೀಡಿದ್ದರು.

ಜೇಮ್ಸ್ ಫಾಲ್ಕನರ್ ಗೆ ಸ್ಲೆಡ್ಜ್ ಮಾಡಿ ಶತಕವನ್ನೇ ಸಿಡಿಸಿದ್ದರು
2016 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ತಮ್ಮನ್ನು ಅಡ್ಡಗಟ್ಟಿ ಕೆಣಕಿದ ಜೇಮ್ಸ್ ಫಾಲ್ಕನರ್ ‘ನೀನು ನನ್ನ ಶ್ರಮವನ್ನು ವೇಸ್ಟ್ ಮಾಡ್ತಾ ಇದ್ದೀಯ’ ಎಂದಾಗ ‘ನಿನಗೆ ನಾನು ಜೀವನದಲ್ಲಿ ಸಾಕಷ್ಟು ಹೊಡೆದಿದ್ದೇನೆ. ಈಗ ಹೋಗಿ ಬಾಲ್ ಮಾಡು’ ಎಂದಿದ್ದರು. ಅಷ್ಟೇ ಅಲ್ಲ ಆ ಪಂದ್ಯದಲ್ಲಿ ಶತಕ ಸಿಡಿಸಿದ್ದರು.

ವಿರಾಟ್ ಕೊಹ್ಲಿ ನೋಟ್ ಬುಕ್ ಸೆಲೆಬ್ರೇಷನ್
ವೆಸ್ಟ್ ಇಂಡೀಸ್ ಬೌಲರ್ ಕೆಸ್ರಿಕ್ ವಿಲಿಯಮ್ಸ್ ಕೊಹ್ಲಿ ವಿಕೆಟ್ ಕಿತ್ತು ಸೆಂಡ್ ಆಫ್ ನೀಡಿ ಕೆಣಕಿದ್ದರು. ಇದಕ್ಕೆ ಮರು ಪಂದ್ಯದಲ್ಲೇ 94 ರನ್ ಗಳಿಸಿ ನೋಟ್ ಬರೆಯುವ ಸ್ಟೈಲ್ ನಲ್ಲಿ ತಿರುಗೇಟು ನೀಡಿದ್ದರು. 2019 ರಲ್ಲಿ ವಿಂಡೀಸ್ ವಿರುದ್ಧದ ಟಿ20 ಪಂದ್ಯದಲ್ಲಿ ಈ ಘಟನೆ ನಡೆದಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ