ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಐಪಿಎಲ್ ಆಡಲು ಶುರು ಮಾಡಿದ ಮೇಲೆ ವಿರಾಟ್ ಕೊಹ್ಲಿಗೆ ಬೆಂಗಳೂರು ಎರಡನೇ ತವರಿದ್ದಂತಾಗಿದೆ.
ವಿರಾಟ್ ಕೊಹ್ಲಿ ಆಗಾಗ ಸಂದರ್ಶನದಲ್ಲಿ ತಮ್ಮ ಆರ್ ಸಿಬಿ ಫ್ಯಾನ್ಸ್, ಬೆಂಗಳೂರಿನ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಇಲ್ಲಿನ ಜನರ ಪ್ರೀತಿ ಪಡೆದ ಮೇಲೆ ಇಲ್ಲಿನ ಭಾಷೆ ಬಗ್ಗೆಯೂ ತಿಳಿದಿರಲೇಬೇಕಲ್ಲವೇ?
ವಿರಾಟ್ ಕೊಹ್ಲಿ ಕನ್ನಡದ ಕೆಲವು ಪದಗಳನ್ನು ಕಲಿತಿದ್ದಾರೆ ಮತ್ತು ಅದನ್ನು ಚೆನ್ನಾಗಿಯೇ ಬಳಸುತ್ತಾರೆ. ಸಾಮಾನ್ಯವಾಗಿ ಉತ್ತರ ಭಾರತೀಯರು ಕನ್ನಡ ಮಾತನಾಡುವಾಗ ಉಚ್ಛಾರಣೆ ಸರಿ ಬರುವುದಿಲ್ಲ. ಆದರೆ ಕೊಹ್ಲಿ ಕನ್ನಡದ ಪದ ಬಳಕೆ ಮಾಡುವಾಗ ಥೇಟ್ ಕನ್ನಡಿಗರೇ ಎನಿಸುವಷ್ಟು ಸ್ಪಷ್ಟವಾಗಿ ಮಾತನಾಡುತ್ತಾರೆ.
ಸಂದರ್ಶನವೊಂದರಲ್ಲಿ ಅವರಿಗೆ ಕನ್ನಡದ ಬಗ್ಗೆ ಕೇಳಿದಾಗ ತಾವು ಕಲಿತ ಕೆಲವು ಶಬ್ಧಗಳನ್ನು ಕೊಹ್ಲಿ ಹೇಳಿದ್ದಾರೆ. ಅಚ್ಚರಿಯ ಆಘಾತವಾದಾಗ ಶ್..ಬ್ಬ…. ಎನ್ನುತ್ತಾರೆ ಎಂದರು. ಜೊತೆಗೆ ಬೆಂಗಳೂರಿಗರು ಸಾಮಾನ್ಯವಾಗಿ ಬಳಸುವ ಏನ್ ಗುರು.. ಎಂದು ಇಲ್ಲಿನ ಶೈಲಿಯಲ್ಲೇ ಹೇಳಿದ್ದಾರೆ. ಜೊತೆಗೆ ಸೂಪರ್ ಎನ್ನುವುದು ಸಖತ್ ಎಂದು ಬೆಂಗಳೂರಿಗರಂತೇ ಉಚ್ಚರಿಸಿ ನೆಟ್ಟಿಗರ ಮೆಚ್ಚುಗೆ ಪಡೆದಿದ್ದಾರೆ.