ಇಂತಹ್ದನ್ನು ಕ್ರಿಕೆಟ್ ನಲ್ಲೇ ಕಂಡಿರಲಿಲ್ಲ! ಸಿಟ್ಟಿಗೆದ್ದ ವಿರಾಟ್ ಕೊಹ್ಲಿ

ಸೋಮವಾರ, 16 ಡಿಸೆಂಬರ್ 2019 (09:14 IST)
ಚೆನ್ನೈ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಿನ್ನೆ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್ ರವೀಂದ್ರ ಜಡೇಜಾಗೆ ರನೌಟ್ ನೀಡಿದ ಪರಿಗೆ ನಾಯಕ ವಿರಾಟ್ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


48 ನೇ ಓವರ್ ನಲ್ಲಿ 21 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ಜಡೇಜಾ ರನ್ ಗಾಗಿ ಓಡಿದಾಗ ಪೊಲ್ಲಾರ್ಡ್ ಎಸೆದ ಚೆಂಡು ವಿಕೆಟ್ ಗೆ ತಗುಲಿ ರನೌಟ್ ಆಗಿದ್ದರು. ಆದರೆ ಇದನ್ನು ಆರಂಭದಲ್ಲಿಯೇ ಗುರುತಿಸದ ಅಂಪಾಯರ್ ಮುಂದಿನ ಎಸೆತಕ್ಕೆ ಸಿದ್ಧರಾಗಿದ್ದರು.

ಆದರೆ ಆಗ ರಿಪ್ಲೇಗಳಲ್ಲಿ ಜಡೇಜಾ ರನೌಟ್ ಆಗಿದ್ದು ಸ್ಪಷ್ಟವಾಯಿತು. ನಂತರ ವಿಂಡೀಸ್ ನಾಯಕ ಪೊಲ್ಲಾರ್ಡ್ ಕೂಡಾ ಅಂಪಾಯರ್ ಬಳಿ ಈ ಬಗ್ಗೆ ಪ್ರಶ್ನಿಸಿದರು. ಆದರೆ ಅದಕ್ಕೆ ತಕ್ಷಣವೇ ಪುರಸ್ಕರಿಸದೇ ಕೆಲವು ಸಮಯದ ಬಳಿಕವಷ್ಟೇ ಅಂಪಾಯರ್ ಥರ್ಡ್ ಅಂಪಾಯರ್ ಗೆ ಮೇಲ್ಮನವಿ ಸಲ್ಲಿಸಿದರು. ಇದು ಕೊಹ್ಲಿ ಸಿಟ್ಟಿಗೆ ಕಾರಣವಾಗಿದೆ. ತಕ್ಷಣವೇ ಮೈದಾನದತ್ತ ಬಂದ ಕೊಹ್ಲಿ ಅಲ್ಲಿಂದಲೇ ಅಂಪಾಯರ್ ವಿರುದ್ಧ ಅಸಮಾಧಾನ ಸೂಚಿಸಿದ್ದರು.

ಈ ಬಗ್ಗೆ ಪಂದ್ಯದ ನಂತರ ಮಾತನಾಡಿದ ಕೊಹ್ಲಿ ‘ಫೀಲ್ಡರ್ ಔಟಾ ಎಂದಾಗ ಅಂಪಾಯರ್ ನಾಟೌಟ್ ಅಂತಾರೆ. ಹೊರಗೆ ಕುಳಿತು ನೋಡುವ ವ್ಯಕ್ತಿಗಳು ಪಂದ್ಯದ ನಿರ್ಧಾರ ಮಾಡುವಂತಾಗಬಾರದು. ಇಂದು ಇದುವೇ ಸಂಭವಿಸಿದ್ದು. ಅಂಪಾಯರ್ ಗಳು ಮತ್ತು ರೆಫರಿಗಳು ಇದನ್ನು ಗಮನಿಸಬೇಕು. ಇಂತಹದ್ದನ್ನು ಇದುವರೆಗೆ ಕ್ರಿಕೆಟ್ ನಲ್ಲಿ ಕಂಡಿರಲಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ