ಭಾರತ-ವಿಂಡೀಸ್ ಟೆಸ್ಟ್: ವಿಂಡೀಸ್ ಗೆ ಬಲ ತಂದ ಆರಂಭಿಕರ ಬ್ಯಾಟಿಂಗ್

ಶನಿವಾರ, 22 ಜುಲೈ 2023 (08:10 IST)
ಪೋರ್ಟ್ ಆಫ್ ಸ್ಪೇನ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ ನಲ್ಲಿ 1 ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿ ಉತ್ತಮ ಆರಂಭ ಪಡೆಯಿತು.

ಇದಕ್ಕೆ ಮೊದಲು ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 438 ರನ್ ಗಳಿಗೆ ಆಲೌಟ್ ಆಯಿತು. ಕೊಹ್ಲಿ 121 ರನ್ ಗಳಿಗೆ ರನೌಟ್ ಆದರು. ಟೆಸ್ಟ್ ಕ್ರಿಕೆಟ್ ನಲ್ಲಿ ಇದು ಮೂರನೇ ಬಾರಿ ಅವರು ರನೌಟ್ ಆದಂತಾಗಿದೆ. ಅವರಿಗೆ ಜೊತೆಯಾಗಿದ್ದ ರವೀಂದ್ರ ಜಡೇಜಾ ಕೂಡಾ 61 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಬಳಿಕ ರವಿಚಂದ್ರನ್ ಅಶ್ವಿನ್ ಟೀಂ ಇಂಡಿಯಾ ಮೊತ್ತ 400 ರ ಗಡಿ ದಾಟಲು ನೆರವಾದರು. ಅಶ್ವಿನ್ 56 ರನ್ ಗಳಿಸಿ ಔಟಾದರು. ಇಶಾನ್ ಕಿಶನ್ 25 ರನ್, ಜಯದೇವ್ ಉನಾದ್ಕಟ್ 7 ರನ್ ಗಳಿಸಿದರು. ಮೊಹಮ್ಮದ್ ಸಿರಾಜ್ 11 ಎಸೆತ ಎದುರಿಸಿಯೂ ಖಾತೆ ತೆರೆಯದೇ ಔಟಾದರು. ವಿಂಡೀಸ್ ಪರ ರೋಚ್, ವಾರಿಕನ್ ತಲಾ 3 ವಿಕೆಟ್ ಕಬಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ವಿಂಡೀಸ್ ಗೆ ಆರಂಭಿಕರಾದ ಕ್ರೆಗ್ ಬ್ರಾತ್ ವೈಟ್, ಚಂದ್ರಪಾಲ್ ಉತ್ತಮ ಆರಂಭ ನೀಡಿದರು. ಆದರೆ ತಂಡದ ಮೊತ್ತ 71 ರನ್ ಗಳಾಗಿದ್ದಾಗ 33 ರನ್ ಗಳಿಸಿದ್ದ ಚಂದ್ರಪಾಲ್ ಔಟಾದರು. ಈ ವಿಕೆಟ್ ರವೀಂದ್ರ ಜಡೇಜಾ ಪಾಲಾಯಿತು. ಇದೀಗ ಕ್ರೀಸ್ ನಲ್ಲಿ 37 ರನ್ ಗಳಿಸಿರುವ ಬ್ರಾತ್ ವೈಟ್ ಮತ್ತು 14 ರನ್ ಗಳಿಸಿರುವ ಮೆಕೆಂಝಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ವಿಂಡೀಸ್ ಇನ್ನೂ 352 ರನ್ ಗಳ ಹಿನ್ನಡೆಯಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ