ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಐದನೇ ಟೆಸ್ಟ್ ಪಂದ್ಯಕ್ಕೆ ಜಸ್ಪ್ತೀತ್ ಬುಮ್ರಾ ನಾಯಕನಾಗುತ್ತಿದ್ದಂತೇ ಅವರ ಖದರೇ ಬದಲಾಗಿದೆ. ಆಸೀಸ್ ಬ್ಯಾಟಿಗ ಜಾನ್ ಕಾನ್ ಸ್ಟಾಸ್ ಗೆ ಏನು ನಿನ್ನ ಪ್ರಾಬ್ಲಂ ಎಂದು ಬುಮ್ರಾ ಠಕ್ಕರ್ ಕೊಟ್ಟ ವಿಡಿಯೋ ಈಗ ವೈರಲ್ ಆಗಿದೆ.
ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಔಟಾಗಿ ಮರಳುವಾಗ ವಿರಾಟ್ ಕೊಹ್ಲಿ ಭುಜ ತಾಕಿಸಿದರು ಎನ್ನುವುದನ್ನು ಜಾನ್ ಕಾನ್ ಸ್ಟಾಸ್ ದೊಡ್ಡ ವಿಚಾರ ಮಾಡಿಬಿಟ್ಟರು. ಆಗ ಅವರ ಬಗ್ಗೆ ಎಲ್ಲರಲ್ಲಿ ಅನುಕಂಪವಿತ್ತು. ಆದರೆ ಈ ಪಂದ್ಯದಲ್ಲೂ ಅವರ ಕ್ಯಾತೆ ಮುಂದುವರಿದಿದೆ.
ಐದನೇ ಪಂದ್ಯದಲ್ಲಿ ಭಾರತ ಮೊದಲ ಇನಿಂಗ್ಸ್ ನಲ್ಲಿ 185 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಆಸೀಸ್ ಇಂದಿನ ದಿನದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 9 ರನ್ ಗಳಿಸಿ ದಿನದಾಟ ಮುಗಿಸಿದೆ. ಇಂದಿನ ದಿನದಾಟದಲ್ಲಿ ಬುಮ್ರಾ ಮತ್ತು ಕಾನ್ ಸ್ಟಾಸ್ ನಡುವಿನ ವಾಗ್ವಾದ ಹೈಲೈಟ್ ಆಗಿತ್ತು.
ಬುಮ್ರಾ ಬೌಲಿಂಗ್ ಮಾಡಲು ರೆಡಿಯಾದಾಗ ಉಸ್ಮಾನ್ ಖವಾಜ ಇನ್ನೂ ರೆಡಿ ಆಗಿಲ್ಲ ಎಂದು ಸ್ವಲ್ಪ ತಡ ಮಾಡಿದರು. ಬಳಿಕ ಬುಮ್ರಾ ರನ್ ಅಪ್ ಶುರು ಮಾಡಿದಾಗ ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದ ಜಾನ್ ಕಾನ್ ಸ್ಟಾಸ್ ತಡೆದರು. ಇದು ಬುಮ್ರಾ ಸಿಟ್ಟಿಗೆ ಕಾರಣವಾಯಿತು. ಏನು ನಿನ್ನ ಪ್ರಾಬ್ಲಂ ಎಂದು ಅವರ ಬಳಿ ಹೋಗಿ ಹೇಳಿದರು. ಈ ವೇಳೆ ಕಾನ್ ಸ್ಟಾಸ್ ಕೂಡಾ ವಾಗ್ವಾದ ನಡೆಸಿದ್ದಾರೆ. ಬಳಿಕ ಅಂಪಾಯರ್ ಇಬ್ಬರನ್ನೂ ಬೇರ್ಪಡಿಸಿದರು.
ಆದರೆ ನಂತರದ ಎಸೆತದಲ್ಲೇ ಉಸ್ಮಾನ್ ಖವಾಜ ಕೆಎಲ್ ರಾಹುಲ್ ಗೆ ಕ್ಯಾಚಿತ್ತು ನಿರ್ಗಮಿಸಿದರು. ಈ ವೇಳೆ ಕಾನ್ ಸ್ಟಾಸ್ ಬಳಿ ನುಗ್ಗಿ ಬರುವಂತೆ ಆಕ್ರಮಣಕಾರಿಯಗಿ ಬುಮ್ರಾ ಸಂಭ್ರಮಿಸಿದ್ದಾರೆ. ಸಾಮಾನ್ಯವಾಗಿ ಬುಮ್ರಾ ಮೈದಾನದಲ್ಲಿ ಈ ರೀತಿಯ ವರ್ತನೆ ತೋರುವುದಿಲ್ಲ. ಆದರೆ ನಾಯಕನಾಗುತ್ತಿದ್ದಂತೇ ಅವರಲ್ಲಿ ಆಕ್ರಮಣಕಾರೀ ಮನೋಭಾವ ಕಾಣಿಸಿಕೊಂಡಿದೆ. ಜೊತೆಗೆ ಆಸ್ಟ್ರೇಲಿಯಾ ಆಟಗಾರರಿಗೂ ಆಕ್ರಮಣಕಾರೀ ಫೀಲ್ಡಿಂಗ್ ಸೆಟ್ ಮಾಡಿ ತಮ್ಮ ನಾಯಕತ್ವದ ಶೈಲಿಯೇ ಬೇರೆ ಎಂದು ತೋರಿಸಿಕೊಟ್ಟಿದ್ದಾರೆ.