ಮುಂಬೈ: ಟೀಂ ಇಂಡಿಯಾದ ಪ್ರತಿಭಾವಂತ ವಿಕೆಟ್ ಕೀಪರ್ ಬ್ಯಾಟಿಗರಾಗಿರುವ ಕೆಎಲ್ ರಾಹುಲ್ ಮತ್ತು ಇಶಾನ್ ಕಿಶನ್ ಗೆ ಪರ್ಮನೆಂಟ್ ಆಗಿ ಟೀಂ ಇಂಡಿಯಾ ಬಾಗಿಲು ಬಂದ್ ಆಗುತ್ತಾ? ಹೀಗೊಂದು ಆತಂಕ ಅಭಿಮಾನಿಗಳಿಗೆ ಶುರುವಾಗಿದೆ.
ಕಳೆದ ಡಿಸೆಂಬರ್ ನಿಂದ ಇಶಾನ್ ಕಿಶನ್ ಟೀಂ ಇಂಡಿಯಾ ಪರ ಯಾವುದೇ ಪಂದ್ಯಗಳನ್ನು ಆಡಿಲ್ಲ. ನವಂಬರ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಟಿ20 ಸರಣಿಯಲ್ಲಿ ಪಾಲ್ಗೊಂಡಿದ್ದೇ ಕೊನೆ. ಅದಾದ ಬಳಿಕ ಮಾನಸಿಕವಾಗಿ ಸುಸ್ತಾಗಿದ್ದೇನೆಂದು ಆಫ್ರಿಕಾ ವಿರುದಧದ ಟೆಸ್ಟ್ ಸರಣಿಯಿಂದ ಹೊರನಡೆದರು. ಇದಾದ ಬಳಿಕ ಅವರು ಕೋಚ್, ಆಯ್ಕೆ ಸಮಿತಿಯ ಸಲಹೆಗಳನ್ನು ಧಿಕ್ಕರಿಸಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾದರು. ಬಳಿಕ ಅವರನ್ನು ಆಯ್ಕೆ ಸಮಿತಿ ಸಂಪೂರ್ಣವಾಗಿ ಕಡೆಗಣಿಸಿತು. ಇದೀಗ ಅವರು ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಲು ಅವಕಾಶ ಸಿಗಬಹುದೇ ಎಂದು ನೋಡುವಂತಾಗಿದೆ.
ಇತ್ತ ಕೆಎಲ್ ರಾಹುಲ್ ರನ್ನು ತಂಡದಿಂದ ಯಾಕೆ ಕಡೆಗಣಿಸಲಾಯಿತು ಎಂಬುದಕ್ಕೆ ಬಿಸಿಸಿಐಯೇ ಉತ್ತರ ಹೇಳಬೇಕು. ಕಳೆದ ಏಕದಿನ ವಿಶ್ವಕಪ್ ನಲ್ಲಿ ವಿಕೆಟ್ ಕೀಪರ್ ಆಗಿ, ಬ್ಯಾಟಿಗನಾಗಿ ಉಪಯುಕ್ತ ಆಟಗಾರನಾಗಿದ್ದ ಕೆಎಲ್ ರಾಹುಲ್ ರನ್ನು ಆಯ್ಕೆ ಸಮಿತಿ ಇದ್ದಕ್ಕಿದ್ದಂತೆ ಕಡೆಗಣಿಸಿತು.
ಇದರ ನಡುವೆ ಐಪಿಎಲ್ 2024 ರ ವೇಳೆ ಲಕ್ನೋ ಸೂಪರ್ ಜೈಂಟ್ಸ್ ಕೋಚ್ ಜಸ್ಟಿನ್ ಲ್ಯಾಂಗರ್, ಟೀಂ ಇಂಡಿಯಾ ಕೋಚ್ ಗೆ ಅರ್ಜಿ ಸಲ್ಲಿಸುವ ವಿಚಾರದ ಬಗ್ಗೆ ಮಾತನಾಡುವಾಗ ರಾಹುಲ್ ನೀಡಿದ ಸಲಹೆಯನ್ನು ಬಹಿರಂಗಪಡಿಸಿದ್ದರು. ಟೀಂ ಇಂಡಿಯಾ ಕೋಚ್ ಆಗಬೇಕೆಂದರೆ ಸಾಕಷ್ಟು ರಾಜಕೀಯ ಒತ್ತಡ ಎದುರಿಸಬೇಕಾಗುತ್ತದೆ ಎಂದು ರಾಹುಲ್ ಹೇಳಿದ್ದಾಗಿ ಲ್ಯಾಂಗರ್ ನೀಡಿದ ಹೇಳಿಕೆ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಯಿತು.
ಅದಾದ ಬಳಿಕ ಟಿ20 ವಿಶ್ವಕಪ್ ಮಾತ್ರವಲ್ಲ ಈಗ ನಡೆಯುತ್ತಿರುವ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಿಂದಲೂ ಅವರನ್ನು ಹೊರಗಿಡಲಾಗಿದೆ. ಆದರೆ ಈಗ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ರಾಹುಲ್ ಕಮ್ ಬ್ಯಾಕ್ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಒಂದು ವೇಳೆ ಅಗಲೂ ಕೆಎಲ್ ರಾಹುಲ್ ರನ್ನು ಕಡೆಗಣಿಸಿದರೆ ಅವರಿಗೆ ಟೀಂ ಇಂಡಿಯಾ ಬಾಗಿಲು ಬಹುತೇಕ ಮುಚ್ಚಿದಂತಾಗಲಿದೆ.